-ರಘೋತ್ತಮ ಹೊ.ಬ
ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ: ಮನನೊಂದ ಯುವಕರಿಂದ ಆತ್ಮಹತ್ಯೆ ಯತ್ನ ಎಂಬ ಸುದ್ದಿ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಇದಕ್ಕೆ ಪರಿಹಾರ?ಪರಿಹಾರವನ್ನು ವಯಕ್ತಿಕ ನೆನಪುಗಳ ಮೂಲಕವೇ ನಾನು ಬಿಚ್ಚಿಡಲು ಯತ್ನಿಸುವುದಾದರೆ, ಬಾಲ್ಯದಲ್ಲಿ ನಮ್ಮ ಊರಿನಲ್ಲಿ ವಿಶೇಷವಾಗಿ ನಮ್ಮ ಬೀದಿಯಲ್ಲಿ ನಮಗೆ ಕೂದಲು ಕತ್ತರಿಸುವ ಸಮಸ್ಯೆಯೇ ಇರಲಿಲ್ಲ! ಅಸ್ಪೃಶ್ಯತೆ ಅದು ಇದು ಏನೂ ಇರಲಿಲ್ಲ! ಕಾರಣ ನಮ್ಮದೆ ಸಮುದಾಯದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಅಜ್ಜ ರತ್ನಯ್ಯ ಕೂದಲು ಕತ್ತರಿಸುವ, ಕ್ಷೌರ ಮಾಡುವ ವೃತ್ತಿ ಮಾಡುತ್ತಿದ್ದರು. ಸುಮಾರು ಅರೆ ಬರೆ ಶೈಲಿಯಲ್ಲಿ ಕೂದಲು ಕತ್ತರಿಸುತ್ತಿದ್ದ ಅವರ ಬಳಿ ಬಾಲಕರಾದ ನಮಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳುವುದು ಕೆಲವೊಮ್ಮೆ ಹಿಂಸೆ ಎನಿಸುತ್ತಿತ್ತು. ಆದರೆ ನಮ್ಮ ಅಪ್ಪನಿಗೆ, ಬೀದಿಯ ಇತರರಿಗೆ ಅದೇ ಒಂದು ರೀತಿಯ ವರದಾನವಾಗಿತ್ತು. ಪರಿಣಾಮ ಕ್ಷೌರ ವೃತ್ತಿಗೆ ಸಂಬಂಧಿಸಿದ ಅಸ್ಪೃಶ್ಯತೆ ಒಂದು ದಿನವೂ ನಮಗೆ ಕಾಡಲಿಲ್ಲ!
ಇವರಲ್ಲದೆ ಮತ್ತೊಬ್ಬ ಅಣ್ಣ ನಮ್ಮ ಪಕ್ಕದ ಊರಿಂದ ಬರುತ್ತಿದ್ದ ನಮ್ಮದೆ ಸಮುದಾಯದ ಸಿದ್ದಣ್ಣ ಹೇರ್ ಕಟಿಂಗ್ ಉಪಕರಣಗಳ ಸಮೇತ ವಾರಕ್ಕೊಮ್ಮೆ ಹಾಜರಾಗುತ್ತಿದ್ದ. ಸಿದ್ದಣ್ಣ ಯಾರದ್ದಾದರೂ ಜಗುಲಿ ಮೇಲೆ ಕುಳಿತುಕೊಂಡರೆಂದರೆ ಸಾಕು ಅದೇ ಆವತ್ತಿನ ಕಟಿಂಗ್ ಶಾಪ್ ಆಗುತ್ತಿತ್ತು. ಅಲ್ಲದೇ ಸಿದ್ದಣ್ಣ ತಮ್ಮ ಸ್ವಂತ ಊರಿನಲ್ಲೂ ತನ್ನದೆ ಸ್ವಂತ ಒಂದು ಹೇರ್ ಕಟಿಂಗ್ ಶಾಪ್ ಇಟ್ಟುಕೊಂಡಿದ್ದರಿಂದ ನಮಗೆ ಹಬ್ಬ ಹರಿದಿನಗಳಲ್ಲಿಯೂ ಸಮಸ್ಯೆ ಆಗುತ್ತಿರಲಿಲ್ಲ. ಸುಮಾರು 3 ಕಿ.ಮೀ ದೂರದಲ್ಲಿ ಇದ್ದ ಸಿದ್ದಣ್ಣನ ಆ ಶಾಪ್ ಗೆ ಒಮ್ಮೆ ಅಪ್ಪ ಸೈಕಲ್ ನಲ್ಲಿ ಕೂರಿಸಿಕೊಂಡು ಹೋಗಿ ನನಗೆ ಹೇರ್ ಕಟಿಂಗ್ ಮಾಡಿಸಿದ ನೆನಪು ನನಗೆ ಈಗಲೂ ಹಚ್ಚಹಸಿರಾಗಿದೆ.
ಆದ್ದರಿಂದ ಶೋಷಿತ ಸಮುದಾಯಗಳ ಜನರು ಇತರೆ ಜನಾಂಗಗಳ ಅಂಗಡಿಗಳಿಗೆ ಹೋಗಿ ಅವರು ಕಟಿಂಗ್ ಮಾಡಲಿಲ್ಲ, ಇವರು ನೀರು ಕೊಡಲಿಲ್ಲ, ದೇವಾಲಯ ಪ್ರವೇಶ ಕೊಡಲಿಲ್ಲ ಎಂದು ಹಲುಬುವ ಬದಲು ತಮ್ಮದೇ ಸ್ವಂತ ಹೇರ್ ಕಟಿಂಗ್ ಸೆಲೂನ್ ಗಳನ್ನು ತೆರೆಯಬೇಕು. ಆ ಮೂಲಕ ಸಮುದಾಯದ ಒಬ್ಬ ವ್ಯಕ್ತಿಗೆ ಒಂದು ಊರಿನಲ್ಲಿ ಒಂದು ಉದ್ಯೋಗ ಸಿಕ್ಕಂತೆ ಆಗುತ್ತದೆ ಅಸ್ಪೃಶ್ಯತೆ ಕೂಡ ತಪ್ಪುತ್ತದೆ. ಸಮುದಾಯದ ಎಲ್ಲಾ ಸದಸ್ಯರು ಅಲ್ಲಿಯೇ ಕಟಿಂಗ್ ಮಾಡಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಹಾಗೆ ಸಂಬಂಧಿಸಿದ ಆ ಹೇರ್ ಕಟಿಂಗ್ ಶಾಪ್ ತೆರೆಯುವ ವ್ಯಕ್ತಿ ಅದನ್ನು ಪಾರ್ಟಟೈಂ ಉದ್ಯೋಗದ ರೀತಿ ಮಾಡಿಕೊಂಡರೂ ಸರಿಯೇ. ಈ ದಿಸೆಯಲ್ಲಿ ಶೋಷಿತ ಸಮುದಾಯಗಳ ಮಹಿಳೆಯರು ಕೂಡ ತಮ್ಮದೇ ಸ್ವಂತ ಬ್ಯೂಟಿ ಪಾರ್ಲರ್ ಗಳನ್ನು ತೆಗೆಯುವುದು ಉಚಿತ ಮುಖ್ಯವಾಗಿ ಸ್ವಯಂ ಉದ್ಯೋಗದ ದೃಷ್ಟಿಯಲ್ಲಿ.
ಒಟ್ಟಾರೆ ಹೇರ್ ಕಟಿಂಗ್ ಶಾಪ್ ಗೆ ಸಂಬಂಧಿಸಿದ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಶೋಷಿತ ಸಮಯ ಜನರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಬದಲಿಗೆ ಅದನ್ನೇ ಒಂದು ಚಾಲೆಂಜ್ ಆಗಿ ತೆಗೆದುಕೊಂಡು ತಾವೇ ಆ ವೃತ್ತಿಗೆ ಇಳಿಯಬೇಕು. ಆ ಮೂಲಕ ಅಸ್ಪೃಶ್ಯತೆಯಿಂದ ತಪ್ಪಿಸಿಕೊಳ್ಳಬೇಕು, ಅಲ್ಲದೇ ಸ್ವಯಂ ಉದ್ಯೋಗದ ದಾರಿಯಾಗಿಯೂ ಅದನ್ನು ಕಂಡುಕೊಳ್ಳಬೇಕು ಅಥವಾ ಕಂಡುಕೊಳ್ಳಬಹುದು.
Comments
Post a Comment