-ರಘೋತ್ತಮ ಹೊ.ಬ
"ಸ್ವಾಭಿಮಾನ ಅಥವಾ ಆತ್ಮಗೌರವದ ಚಳುವಳಿ ಕಳೆದುಕೊಳ್ಳುವುದು ಏನೂ ಇಲ್ಲ, ಎಲ್ಲವೂ ಪಡೆದುಕೊಳ್ಳುವುದೇ ಆಗಿದೆ" -ಡಾ.ಬಿ.ಆರ್.ಅಂಬೇಡ್ಕರ್*
1937 ಡಿಸೆಂಬರ್ 31ರ ಮಧ್ಯಾಹ್ನ ಡಾ.ಅಂಬೇಡ್ಕರ್ ರವರು ಮಹಾರಾಷ್ಟ್ರದಲ್ಲಿ ಪಂಡರಾಪುರಕ್ಕೆ ಬರುತ್ತಾರೆ ಮತ್ತು ಆ ದಿನ ಅಲ್ಲಿ ಅವರು ಅಂದು ಸಂಘಟಿಸಲ್ಪಟ್ಟಿದ್ದ ಸಮ್ಮೇಳನದಲ್ಲಿ ಮಾತನಾಡುತ್ತಾರೆ. ಆ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿರುತ್ತಾರೆ.
ಆ ಸಂದರ್ಭದಲ್ಲಿ ಡಾ.ಅಂಬೇಡ್ಕರರು ಹೇಳುವುದು "ನಮ್ಮ ನಡುವೆ ಮೂರು ಸಮಸ್ಯೆಗಳಿವೆ. ಒಂದನೆಯದು, ಹಿಂದೂ ಸಮಾಜದಲ್ಲಿ ನಮಗೆ ಸಮಾನ ಸ್ಥಾನಮಾನ ನೀಡಲಾಗುತ್ತದೆಯೇ?. ಎರಡನೆಯದು, ರಾಷ್ಟ್ರೀಯ ಸಂಪತ್ತಿನಲ್ಲಿ ನಮಗೆ ಸಮಾನ ಪಾಲು ದೊರೆಯುತ್ತದೆಯೇ?. ಮೂರನೆಯದು, ಆತ್ಮಗೌರವ (self respect) ಮತ್ತು ನಮ್ಮ ಏಳಿಗೆಗೆ ನಾವೇ ದುಡಿಯಬೇಕಿರುವ (self help) ಈ ಚಳುವಳಿಯ ಭವಿಷ್ಯ ಏನಾಗಬಹುದು. ಮೊದಲನೆಯದರ ಬಗ್ಗೆ ಹೇಳುವುದಾದರೆ, ಜಾತಿ ವ್ಯವಸ್ಥೆ ಇರುವ ತನಕ ಹಿಂದೂ ಸಮಾಜದಲ್ಲಿ ನಮಗೆ ಸಮಾನ ಸ್ಥಾನಮಾನ ಸಿಗುವುದು ಸಾಧ್ಯವಿಲ್ಲ. ಎರಡನೆಯದರ ಬಗ್ಗೆ, ಬಂಡವಾಳಶಾಹಿ ಆಧಾರಿತ ಪಕ್ಷಗಳು ಆಳುತ್ತಿರುವ ತನಕ ರಾಷ್ಟ್ರೀಯ ಸಂಪತ್ತಿನಲ್ಲಿ ನಮಗೆ ಪಾಲು ಸಿಗುವುದು ಸಾಧ್ಯವಿಲ್ಲ. ಮೂರನೆಯದು, ಪ್ರಸ್ತುತದ ಸರ್ಕಾರಗಳು ಇರುವ ತನಕ ನಮಗೆ ಆರ್ಥಿಕ ಸ್ವಾತಂತ್ರ್ಯ ಸಿಗುವುದು ಸಾಧ್ಯವಿಲ್ಲ. ಆದ್ದರಿಂದ ಬಂಡವಾಳ ಶಾಹಿಗಳ ವಿರುದ್ಧ ಒಂದು ವೇದಿಕೆ (front) ನಿರ್ಮಿಸುವ ಅಗತ್ಯವಿದೆ. ಹಾಗೆಯೇ ಆರ್ಥಿಕ ಸ್ವಾತಂತ್ರ್ಯವನ್ನು ಗೆಲ್ಲುವ ಸಮಯ ಕೂಡ ಶೀಘ್ರದಲ್ಲೇ ನಮಗೆ ಒದಗಿ ಬರಲಿದೆ. ಆದರೆ ಒಂದಂತು ನಿಜ, ಚಳುವಳಿಯ ಭವಿಷ್ಯದ ಬಗ್ಗೆ ಹೇಳುವುದಾದರೆ ಸ್ವಾಭಿಮಾನ ಅಥವಾ ಆತ್ಮಗೌರವದ ಚಳುವಳಿ ಎಂದಿಗೂ ಕಳೆದುಕೊಳ್ಳುವುದು ಏನೂ ಇಲ್ಲ, ಎಲ್ಲವೂ ಪಡೆದುಕೊಳ್ಳುವುದೇ ಆಗಿದೆ".
(Dr.Ambedkar writings, Vol.17, Part 3, Pp.165)
ಹೀಗೆ ಹೇಳುತ್ತಾ ಡಾ.ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕಾದ ಒಂದು ವಿಚಾರವೆಂದರೆ ಅವರು ಅಂದು ಆರಂಭಿಸಿದ ಶೋಷಿತ ಸಮುದಾಯಗಳ ಸ್ವಾಭಿಮಾನದ ಅಥವಾ ಆತ್ಮಗೌರವ ಗಳಿಸುವ ಚಳುವಳಿ ಅದು ಎಂದಿಗೂ ಕಳೆದುಕೊಳ್ಳುವುದು ಏನೂ ಇಲ್ಲ, ನಾವು ಮಾಡುವ ಒಂದೊಂದು ಪುಟ್ಟ ಪುಟ್ಟ ಪ್ರಯತ್ನ ಎಲ್ಲವೂ ಪಡೆದುಕೊಳ್ಳುವುದೇ ಆಗಿದೆ ಎಂಬುದು.
***
Comments
Post a Comment