ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.
ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯದ ಒಬ್ಬ ನೌಕರ ಸಂಘಟಕರು ತನ್ನನ್ನು ಕರೆಯಲಿ ಎಂದು ದೂರದಲ್ಲೆಲ್ಲೊ ಹಿಂದೆ ನಿಂತಿದ್ದಿರು. ಸಂಘಟಕರು ಅವರನ್ನು ಉದಾಸೀನ ಮಾಡೇ ಕಾರ್ಯಕ್ರಮ ಪೂರ್ಣಗೊಳಿಸುತ್ತಿದ್ದರು! ಈ ಸಂದರ್ಭದಲ್ಲಿ ಕೆಲವರ ಗಮನಕ್ಕೆ ಬಂದ ಇದು ಈ ರೀತಿ ಮಾಡಬಾರದು, ಅವರನ್ನು ವೇದಿಕೆಗೆ ಕರೆಯಬೇಕು ಎಂದು ಮಾತಾಡಿಕೊಳ್ಳತೊಡಗಿದರು. ಇದನ್ನೆಲ್ಲ ಗಮನಿಸುತ್ತಿದ್ದ ನಾನು ಎಂದಿಗೆ ಈ ತಾರತಮ್ಯ ಕೊನೆಗೊಳ್ಳುತ್ತದೆ ಎಂದು ಒಳಗೊಳಗೆ ಕುದಿಯುತ್ತಿದ್ದೆ, ಆದರೂ ತೋರ್ಪಡಿಸದೆ ಸುಮ್ಮನಿದ್ದೆ. ಕೊನೆಗೆ ಫೊಟೊ ಸೆಷನ್ ಬಂತು. ಆಗಲು ದಲಿತ ಸಮುದಾಯದ ಆ ವ್ಯಕ್ತಿ ತನ್ನನ್ನು ಕರೆಯಲಿ ಎಂದೇ ಹಿಂದೆ ನಿಂತಿದ್ದರು. ಕರೆದರು ಕೂಡ ವೇದಿಕೆಗೆ ಆಹ್ವಾನಿಸದ ಕಾರಣಿಟ್ಟುಕೊಂಡು ಬರಲಿಲ್ಲ. ತಕ್ಷಣ ಎಚ್ಚೆತ್ತ ನಾನು "ಬನ್ನಿ ಇಲ್ಲಿ, ಇಲ್ಲಿ ಯಾರು ಮೇಲ್ಜಾತಿ ಅಲ್ಲ ಯಾರು ಕೆಳಜಾತಿ ಅಲ್ಲ, ಇದು ಸಾರ್ವಜನಿಕ ಕಾರ್ಯಕ್ರಮ, ಯಾರಪ್ಪನ ಮನೆಯ ಕಾರ್ಯಕ್ರಮ ಇದಲ್ಲ, ಬನ್ನಿ" ಎಂದು ಆಕ್ರೋಶದಿಂದ ಹೇಳಿದೆ. ನನ್ನ ಮಾತಿಗೆ ದನಿಕೊಟ್ಟ ಅವರು ತಕ್ಷಣ ಬಂದು ಕಾರ್ಯಕ್ರಮ ದಲ್ಲಿ ಆಸೀನರಾದರು. ಇತರರು ನನ್ನ ಈ ಆಕ್ರೋಶ ನೋಡಿ ಅರೆಕ್ಷಣ ಗಲಿಬಿಲಿಗೊಂಡರು.
ಹೌದು, ಅವಕಾಶಗಳನ್ನು ಯಾರೂ ಕರೆದುಕೊಡುವುದಿಲ್ಲ. ಅದನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಸಾಧ್ಯವಾದರೆ ಹೋರಾಟ ಮತ್ತು ಪ್ರತಿಭಟನೆ ಮೂಲಕ ಅದನ್ನು ಕಿತ್ತುಕೊಳ್ಳಬೇಕು. ನಾವು ಅವಕಾಶ ಕೊಡುವರು ಎಂದು ಕಾಯುತ್ತಾ ಕುಳಿತರೆ ಜಾತಿವಾದಿ ಸಮಾಜದ ವ್ಯಕ್ತಿಗಳು ಉದಾಸೀನ ಮಾಡುತ್ತ ನಡೆಯುತ್ತಾರೆ. ಹೆಚ್ಚೆಂದರೆ ಮೇಲಿನ ಡಿ ಗ್ರೂಪ್ ನೌಕರನ ಉದಾಹರಣೆ ರೀತಿ ಸಿಂಪಥಿ ತೋರಬಹುದು. ಆದರೆ ಅವಕಾಶ? ನಮ್ಮ ಪ್ರತಿಭೆಗೆ, ಬುದ್ಧಿವಂತಿಕೆಗೆ ತಕ್ಕ ಅವಕಾಶ?
ಜಾತಿವಾದಿ ಸಮಾಜ ಹೀಗೆಯೇ ನೂರಾರು ವರ್ಷಗಳಿಂದ ನಮ್ಮನ್ನು ಉದಾಸೀನ ಮಾಡುತ್ತ ಅಥವಾ ನಯವಾದ ಮಾತುಗಳಲ್ಲಿ ವಂಚಿಸುತ್ತ, ಕೊನೆಗೆ ಹಿಂಸೆಯ ಅಸ್ತ್ತ ಬಳಸಿ ಅವಕಾಶಗಳಿಂದ ವಂಚಿಸಿದೆ. ಇಲ್ಲಿ ಒಳ್ಳೆಯತನ ಎಲ್ಲಾ ಸಂದರ್ಭಗಳಲ್ಲು ಉಪಯೋಗಕ್ಕೆ ಬರುವುದಿಲ್ಲ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಅರಿತು ಧೈರ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳಬೇಕಾಗುತ್ತದೆ, ಆಗಲಿಲ್ಲ ಅಂದರೆ ಕಿತ್ತುಕೊಳ್ಳಬೇಕಾಗುತ್ತದೆ. ಕಾಯುತ್ತ ಕುಳಿತರೆ ನಾಶ ಖಚಿತ.
***
Comments
Post a Comment