Skip to main content

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

 

ನಾಲ್ವಡಿ ಕೃಷ್ಣರಾಜ ಒಡೆಯರ್

-ರಘೋತ್ತಮ ಹೊಬ

"ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.

 ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ್ ಆಗಿ ನೇಮಿಸಲ್ಪಟವರು ಸರ್. ಫ್ರೇಜರ್ ರವರು. ಮುಂದೆ 1902 ಆಗಸ್ಟ್ 8ರಂದು ಬ್ರಿಟಿಷ್ ರಿಜೆನ್ಸಿಯಿಂದ ಅಧಿಕಾರ ಸ್ವೀಕರಿಸುತ್ತಾ, ಯುವರಾಜ ಕೃಷ್ಣರಾಜರು ತಮ್ಮ ಮುಂದಿನ ಆಳ್ವಿಕೆ ಹೇಗಿರುತ್ತದೆ ಎಂಬುದಕ್ಕೆ ಹೀಗೆ ನುಡಿಯುತ್ತಾರೆ, "ನನ್ನ ಮೇಲೆ ಹೊರಿಸಲ್ಪಟ್ಟಿರುವ ಭಾರವು ಎಷ್ಟು ಮಹತ್ತರವಾದುದು ಎಂಬುದನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ. ಇದನ್ನು ಮಾತಿನಿಂದಲ್ಲ ಕೃತಿಯಿಂದ ಸಾಬೀತುಪಡಿಸಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ, ನನ್ನ ಪ್ರಜೆಗಳ ಸುಖ ಸಂತೋಷಗಳಿಗೆ ಎಂದೂ ಕುಂದುಂಟಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಸಂಸ್ಥಾನದ ಸ್ಥಿತಿಯು ಇನ್ನೂ ಉತ್ತಮವಾಗುವಂತೆ ಮಾಡುತ್ತೇನೆ. ಯಾರ ಭಯವಾಗಲಿ, ದಾಕ್ಷಿಣ್ಯವಾಗಲಿ ಇಲ್ಲದೇ ಯಾರ ತಂತ್ರಕ್ಕೂ ಹಿಂಜರಿಯದೇ, ಯಾವ ಮಂತ್ರಕ್ಕೂ ಒಳಗಾಗದೇ ನನ್ನ ಪ್ರಜೆಗಳ ನಿರಂತರ ಹಿತ ರಕ್ಷಣೆಗಾಗಿ ರಾಜ್ಯ ಭಾರ ನಿರ್ವಹಿಸುತ್ತೇನೆ" ಎನ್ನುತ್ತಾರೆ. 

ಹಾಗಿದ್ದರೆ ಮಹಾರಾಜರು ನುಡಿದಂತೆ ನಡೆದರೆ? ತಮ್ಮ ಮಾತನ್ನು ಜೀವನದುದ್ದಕ್ಕೂ ಉಳಿಸಿಕೊಡರೆ? ಖಂಡಿತ 38 ವರ್ಷಗಳ ಅವರ ಭವ್ಯ ನಿರ್ದಾಕ್ಷಿಣ್ಯ ಆಡಳಿತ ಅದಕ್ಕೆ ಸಾಕ್ಷೀಭೂತವಾಗಿದೆ. ಆಡಳಿತ ಚುಕ್ಕಾಣಿ ಹಿಡಿದ ಮಹಾರಾಜರು ತಾನೊಬ್ಬ ರಾಜ ಇಡೀ ರಾಜ್ಯವೇ ನನ್ನ ಬಿಗಿಮುಷ್ಠಿಯಲ್ಲಿರಬೇಕು ಎಂದುಕೊಳ್ಳಲಿಲ್ಲ. ಬದಲಾಗಿ ತಾನೊಬ್ಬ ಜನ ಸೇವಕ ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಅಪ್ಪಟ ಪ್ರಜಾಪ್ರಭುತ್ವವಾದಿ ಅರಸು ಎನ್ನಿಸಿಕೊಂಡರು. ಅದಕ್ಕಾಗಿ ಪ್ರಜಾಪ್ರತಿನಿಧಿ ಸಭೆಯನ್ನು ಬಲಗೊಳಿಸಿ 1907ರಲ್ಲಿ ನ್ಯಾಯಾವಿಧಾಯಕ ಸಭೆಯನ್ನು ಸ್ಥಾಪಿಸಿ ಸರ್ವರಿಗೂ ಅದರಲ್ಲಿ ಪ್ರಾತಿನಿದ್ಯ ನೀಡಿ ಸಮಾನತೆ ಮೆರೆದರು. ಇಡೀ ರಾಜ್ಯವನ್ನೇ ತಮ್ಮ ಆಸ್ತಿಯೆಂದು ಪರಿಗಣಿಸದೆ ತಮ್ಮ ಸಂಸಾರಕ್ಕೆ ಎಷ್ಟು ಹಣ ಬೇಕೆಂಬುದನ್ನು ಕೂಡ ಅಯ-ವ್ಯಯದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಅನುಮೊದನೆ ಪಡೆದುಕೊಳ್ಳಲು ಪ್ರಾರಂಭಿಸಿದರು. ಪ್ರಾಯಶಃ ಮಹಾರಾಜರ ಈ ಕ್ರಮ ಇಡೀ ಭರತ ಖಂಡದಲ್ಲೆಯೇ ಅಪರೂಪದ್ದು.

ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಮೀಸಲಾತಿ ಚಳುವಳಿಯ ಇತಿಹಾಸದಲ್ಲೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು: 1902ರಲ್ಲಿ ಕೊಲ್ಲಪುರ ಸಂಸ್ಥಾನದಲ್ಲಿ ಅಲ್ಲಿಯ ಅರಸು ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ. 50 ಮೀಸಲಾತಿ ನೀಡಿದ ನಂತರ ಅದರಿಂದ ಸ್ಪೂರ್ತಿಗೊಂಡ ಅವರು 1927ರಲ್ಲಿ ಮಿಲ್ಲರ್ (Miller) ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ (Non-Brahmin Reservation in Mysore State) ಶೇ 75% ಮೀಸಲಾತಿ ನೀಡುತ್ತಾರೆ (Backward Caste Reservation in Mysore State). ತನ್ಮೂಲಕ ಸಾಮಾಜಿಕ ನ್ಯಾಯದಲ್ಲಿ ಹೊಸ ಶಕೆಗೆ ನಾಂದಿ ಹಾಡುತ್ತಾರೆ. ಮಹಾರಾಜರ ಈ ನಿರ್ಧಾರದ ವಿರುದ್ಧ ಅಂದಿನ ದಿವಾನರಾಗಿದ್ದ ಸರ್. ಎಂ ವೀಶ್ವೇಶ್ವರಯ್ಯನವರು (Mokshagundam Visvesvarayya) "ಜಾತಿ ಆಧಾರಿತ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು" ಎನ್ನುತ್ತಾರೆ. ಅಚ್ಚರಿ ಎಂದರೆ ಮಹಾರಾಜರು ಇದರಿಂದ ವಿಚಲಿತರಾಗುವುದಿಲ್ಲ. ಬದಲಿಗೆ ಬೇಸತ್ತ ವೀಶ್ವೇಶ್ವರಯ್ಯನವರು ನೀಡುವ ರಾಜೀನಾಮೆಯನ್ನು ಯಾವುದೇ ಗತ್ಯಂತರವಿಲ್ಲದೆ ಸ್ವೀಕರಿಸುತ್ತಾರೆ!

ತಮ್ಮ 38 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಮಹಾರಾಜರು ಸಾಧನೆಯ ಸುರಿಮಳೆಯನ್ನೆ ಸುರಿಸುತ್ತಾರೆ. ದೇವದಾಸಿ ಪದ್ದತಿಯನ್ನು ನಿರ್ಮೂಲನೆಗೊಳಿಸಿದ್ದು, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು ಮಹಾರಾಜರ ಸಾಮಾಜಿಕ ಕಳಕಳಿಯ ಬಿಂಬಗಳಾಗಿವೆ. "ಜಾತಿ ಆಧಾರದ ಮೇಲೆ ಯಾರನ್ನು ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪ್ರವೃತ್ತಿಯನ್ನು ಸರ್ಕಾರವು ಎತ್ತಿಹಿಡಿಯಲಾರದು" ಎಂಬ ಗೆಜೆಟ್ ಪ್ರಕಟಣೆಯ ಮೂಲಕ ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅವರು ಶಿಕ್ಷಣವೇ ಎಲ್ಲ ಅಭಿವೃದ್ಧಿಗೂ ಮೂಲ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಾರೆ.

ಮುಂದುವರಿದು 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಬಿಸಿದ್ದು, ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದು, 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಿಸಿದ್ದು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿಗೊಳಿಸಿದ್ದು ಮತ್ತು ವಯಸ್ಕರಿಗಾಗಿ 7000 ವಯಸ್ಕರ ಶಾಲೆಗಳನ್ನು ಪ್ರಾರಂಭಿಸಿದ್ದು ಶಿಕ್ಷಣದ ಬಗ್ಗೆ ಮಹಾರಾಜರ ಆದ್ಯತೆಯನ್ನು ತೋರಿಸುತ್ತದೆ. ಹಾಗಂತ ಅವರು ಕೃಷಿ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ವಿಶ್ವವಿಖ್ಯಾತ ಕೃಷ್ಣ ರಾಜ ಸಾಗರ ನಿರ್ಮಾಣಗೊಂಡಿದ್ದು ಇವರ ಕಾಲದಲ್ಲೇ. ಇದರ ಮೂಲಕ ಆ ಕಾಲದಲ್ಲೇ 1,20,000 ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭವಾದದ್ದು ಕೂಡ ಇವರ ಕಾಲದಲ್ಲೇ. 1902ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಅಡ್ಡಲಾಗಿ ಜಲ ವಿದ್ಯುತ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿದ್ದು, 30,000 ವೋಲ್ಟ್ ವಿದ್ಯುತ್ತನ್ನು ಕೋಲಾರ ಚಿನ್ನದ ಗಣಿಗೆ ವರ್ಗಾಯಿಸಿದ್ದು ಅಚ್ಚರಿಯೆನಿಸಿದರೂ ಸತ್ಯ. ಈ ಸಂದರ್ಭದಲ್ಲಿಯೇ ಜನರು ಮಹಾರಾಜ ನಾಲ್ವಡಿಯವರನ್ನು "ಕೃಷ್ಣ ರಾಜ ಭೂಪ ಮನೆ ಮನೆ ದೀಪ" ಎಂದದ್ದು. ಏಕೆಂದರೆ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದು, ಮೈಸೂರು ಸೇರಿದಂತೆ ಇತರ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಬೆಳಗಿದ್ದು ಇವರ ಕಾಲದಲ್ಲೇ ಅದಕ್ಕೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಜ ನಾಲ್ವಡಿ ಕೃಷ್ಣ ಒಡೆಯರ್ ಸಾಧನೆ ಅನನ್ಯ. ಈ ಕಾರಣದಿಂದಲೇ ಒಂದೆಡೆ ಡಿವಿಜಿಯವರು "ನನ್ನ ತಿಳುವಳಿಕೆಯಲ್ಲಿ 1881ರಿಂದ 1940ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣಯುಗ" ಎಂದಿರುವುದು.

 ಹಾಗೇಯೇ 1938ರ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ "ಭರತ ಖಂಡದಲ್ಲಿಯೇ ಮೈಸೂರು ಮಾದರಿ ಸಂಸ್ಥಾನ" ಎಂದು ದಾಖಲಿಸಿರುವುದು. ಹಾಗಿದ್ದರೆ ಇಷ್ಟೆಲ್ಲ ಸಾಧನೆಗೈದ ನಾಲ್ವಡಿಯವರಿಗೆ ಸಮಸ್ಯೆಗಳು ಕಾಡಲಿಲ್ಲವೇ? ಎನ್ನುವುದಾದರೆ ಉತ್ತರ ಹೌದು. ಬ್ರಾಹ್ಮಣೇತರರಿಗೆ ಶೇ. 75 ಮಿಸಲಾತಿ ಜಾರಿ ಮಾಡಿದ್ದರಿಂದ ಕುದ್ದು ಹೋದ ಪಟ್ಟಭದ್ರ ಹಿತಾಸಕ್ತಿಗಳು 1938 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಮಾಡಿ ಮಹಾರಾಜರ ವಿರುದ್ಧ ಪಿತೂರಿ ನಡೆಸುತ್ತವೆ ಮತ್ತು ಇಂತಹದ್ದೇ ಮತ್ತೊಂದು ಘಟನೆಯಲ್ಲಿ ವಿಧುರಾಶ್ವಥ್ಥ ಎಂಬಲ್ಲಿ ಧ್ವಜಾರೋಹಣ ನಡೆದು ಗೋಲಿಬಾರ್ ಮಾಡಲಾಗುತ್ತದೆ. ದುರಂತವೆಂದರೆ ಈ ಗೋಲಿಬಾರ್ ಗೆ ಮಹಾರಾಜರು ಮತ್ತು ದಿವಾನರು ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಮಹಾರಾಜರು ತೀವ್ರವಾಗಿ ಘಾಸಿಗೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳ ನಡುವೆ ಅವರ ಬೆನ್ನೆಲುಬಂತಿದ್ದ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ರವರು ಆಕಾಲಿಕ ಮರಣಕ್ಕೀಡಾಗುತ್ತಾರೆ. ಇದು ಮಹಾರಾಜರನ್ನು ಇನ್ನಷ್ಟು ಆಘಾತಕ್ಕೀಡುಮಾಡುತ್ತದೆ, ಇಂತಹ ಆಘಾತ ಒತ್ತಡಗಳು ಅಂತಿಮವಾಗಿ ಬಲಿತೆಗೆದುಕೊಳ್ಳುವುದು ಸ್ವತಃ ಮಹಾರಾಜರನ್ನೇ, ಜುಲೈ 31, 1940 ರಂದು ತೀವ್ರ ಹೃದಯಾಘಾತಕ್ಕೆ ಒಳಗಾದ ರಾಜರ್ಷಿ, ಪ್ರಜಾ ಚಿಂತಕ, ಸಾಮಾಜಿಕ ಪರಿವರ್ತನೆಯ ರೂವಾರಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ರ ಪವಿತ್ರ ಚೇತನವು ಆಗಸ್ಟ್ 03, 1940 ರಂದು ಅವರ ದೇಹವನ್ನು ಬಿಟ್ಟು ಆಗಲುತ್ತದೆ, ತನ್ಮೂಲಕ ತನ್ನ ಲಕ್ಷಾಂತರ ದೇಶವಾಸಿಗಳನ್ನು ತಬ್ಬಲಿ ಮಾಡುತ್ತದೆ.

ಆಡಳಿತ ಪ್ರಭೃತಿಗಳಲ್ಲಿ ಭ್ರಷ್ಟಚಾರವೇ ಸದಾಚಾರವಾಗಿ, ಸಾಮಾಜಿಕ ಕಳಕಳಿ, ಜನ ಸೇವೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಾಲ್ವಡಿಯವರಂತಹ ಮಾಹಾಚೇತನಗಳ ಅಗತ್ಯ ಈಗ ತುಂಬಾ ಇದೆ. ಇಂತಹ ಮಹಾಚೇತನ ಪ್ರತಿಯೊಬ್ಬರ ಎದೆಯಲ್ಲಿ ತುಂಬಲಿ, ಅವರ ಉಜ್ವಲ ಇತಿಹಾಸ ಪ್ರತಿಯೊಬ್ಬರ ಮನದಲ್ಲಿ ಅನುರಣಿಸಲಿ ಎಂಬುದಷ್ಟೇ ಸದ್ಯದ ಕಳಕಳಿ.

 ಕಡೆಯದಾಗಿ ಕವಿ ಹನಸೋಗೆ ಸೋಮಶೇಖರ್ ರವರ ಕವನದ ಒಂದು ಸಾಲು "ಮರೆಯೋದುಂಟೆ ಮೈಸೂರು ದೊರೆಯ... ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ…"

Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...