-ರಘೋತ್ತಮ ಹೊ.ಬ
ಬೌದ್ಧ ಧರ್ಮದಲ್ಲಿ ಬಹುಮುಖ್ಯವಾದದ್ದು ತಿಸರಣ. ಅಂದರೆ ಮೂರು ಅಂಶಗಳಿಗೆ ಶರಣು ಹೋಗುವುದು, ನಮಿಸುವುದು, ಗೌರವ ಕೊಡುವುದು ಎಂದರ್ಥ. ಮೂರು ಅಂಶ ಇಲ್ಲಿ ಮೂರು ಹಂತವಾಗಿಯೂ ಕಂಡುಬರುತ್ತದೆ. ಅಂದರೆ ಮೊದಲ ಹಂತ ಬುದ್ಧ , ಎರಡನೆಯ ಹಂತ ಆತ ಬೋಧಿಸಿದ ಧಮ್ಮ, ಮೂರನೆಯ ಹಂತ ಆತನ ಭಿಕ್ಕು ಪರಿವಾರ ಅಥವಾ ಭಿಕ್ಕು ಸಂಘ.
ಇದರರ್ಥ ಬುದ್ಧನ ಅನುಯಾಯಿಗಳು ಮೊದಲು ಬುದ್ಧ ನಿಗೆ ಶರಣು ಹೋಗಬೇಕು ನಂತರ ಆತನ ಧಮ್ಮಕ್ಕೆ ನಂತರ ಸಂಘಕ್ಕೆ. ಈ ಹಿನ್ನೆಲೆಯಲ್ಲಿ ಮೊದಲು ಬುದ್ಧ ಎಂದರೆ ಬೌದ್ಧ ಧರ್ಮಕ್ಕೆ ಬರುವ ಪ್ರತಿಯೊಬ್ಬರೂ ಬುದ್ಧನ ಜೀವನ ಆತನ ತ್ಯಾಗ, ಬದುಕು, ಆತ ಭೇಟಿ ಮಾಡಿದ ಜನರು, ಆತ ಭೇಟಿ ಮಾಡಿದ ಸ್ಥಳಗಳು, ಆತನಿಗೆ ನೆರವಾದ ರಾಜರುಗಳು... ಹೀಗೆ, ಒಟ್ಟಾರೆ ಆತನ ಸಂಪೂರ್ಣ ಜೀವನ. In other sense ಬುದ್ಧನನ್ನು ಆರಾಧಿಸುವುದನ್ನು ಕಲಿಯಬೇಕು. ಭಕ್ತಿ ಎಂಬುದನ್ನು ಈ ಸಂದರ್ಭದಲ್ಲಿ ಬಳಸುವುದನ್ನು ಕೆಲವರು ಆಕ್ಷೇಪಿಸಬಹುದು. ಆದರೆ ಬುದ್ಧನ ಕುರಿತು ಭಕ್ತಿ ಇರಲೇಬೇಕು. ಆ ಭಕ್ತಿಯ ಮತ್ತೊಂದು ಹೆಸರು ಬುದ್ಧನ ಕುರಿತ ಅಚಲ ನಂಬಿಕೆ. ಹೀಗೆ ಬುದ್ಧನನ್ನು ನಂಬಲು , ಗೌರವಿಸಲು ಪ್ರಾರಂಭಿಸಿದ ಬುದ್ಧ ಧರ್ಮದ ಹೊರಗೆ ಇರುವ ವ್ಯಕ್ತಿ ಖಂಡಿತ ಆತನ ಅನುಯಾಯಿ ಆಗುತ್ತಾನೆ.
ಹೀಗೆ ಅನುಯಾಯಿ ಆದ ಆತನಿಗೆ ಪರಿಚಯವಾಗಬೇಕಾದ ಎರಡನೇ ಹಂತ ಧಮ್ಮ ಅಂದರೆ ಬುದ್ಧನ ಬೋಧನೆ. ನಿಜ, ಬುದ್ಧನ ಬದುಕು ತಿಳಿಯುತ್ತಲೇ ಆತನಿಗೆ ಧಮ್ಮಅರಿವಿಗೆ ಬಂದಿರುತ್ತದೆ. ಆದರೆ ಧಮ್ಮವನ್ನು ಒತ್ತಡ ಪೂರ್ವಕವಾಗಿ ಬುದ್ಧನ ಜೀವನದ ಜೊತೆಯೇ ಹೇಳಬಾರದು ಅಥವಾ ಕಲಿಯಲು ತಿಳಿಸಬಾರದು. ಬದಲು ಮೊದಲು ಬುದ್ಧನನ್ನು ಅರಿ ನಂತರ ಧಮ್ಮ ತಿಳಿ ಎನ್ನಬೇಕು. ಬುದ್ಧನನ್ನು ಅರಿಯಲು ಪ್ರಾರಂಭಿಸಿದ ಯಾರಿಗೇ ಆಗಲಿ ಮೊದಲು ಆತನ ಬಗ್ಗೆ ನಂಬಿಕೆ ಭಕ್ತಿ ಬಂದಿರುತ್ತದೆ ನಂತರ ಆತನ ಧಮ್ಮದ ಬಗ್ಗೆ ಕೂಡ ಒಲವು ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲಿಗೆ ಪರಿಚಯ ಆಗಬೇಕಾದ್ದೆ ಬುದ್ಧ ನಂತರ ಆತನ ಧಮ್ಮ.
ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಯಂತೆ ಕೆಲವರು ಹೇಳುವ ಪ್ರಕಾರ ಅವರು ಮೊದಲು ಧಮ್ಮಕ್ಕೆ ಆದ್ಯತೆ ಕೊಡುವಂತೆ ಮಾತನಾಡುತ್ತಿದ್ದಾರೆ. ಉದಾಹರಣೆಗೆ ವ್ಯಕ್ತಿಯೊಬ್ಬ ಕಳ್ಳತನ ಮಾಡುತ್ತಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ವ್ಯಭಿಚಾರಿಯಾಗಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಪದೇ ಪದೇ ಸುಳ್ಳು ಹೇಳುವ ಚಾಳಿ ಬೆಳೆಸಿಕೊಂಡಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಕೊಲೆಗಾರನಾಗಿದ್ದಾರೆ ಅಥವಾ ಆಕಸ್ಮಿಕವಾಗಿ ಆ ಕೃತ್ಯ ಮಾಡಿದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಮದ್ಯ ವ್ಯಸನಿಯಾಗಿದ್ದರೆ ಅಥವಾ ಆಧುನಿಕ ಪಾರ್ಟಿ ಕಲ್ಚರ್ ನಂತೆ ಆಗಾಗ ಆದರೂ ಆತ ಕುಡಿಯುತ್ತಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ಹಾಗೆಯೇ ವ್ಯಕ್ತಿಯೊಬ್ಬ ಇನ್ನೊಬ್ಬರಿಗೆ ವಂಚಿಸುವ, ಇನ್ನೊಬ್ಬರನ್ನು ಹೀಯ್ಯಾಳಿಸುವ, ನೋವುಂಟುಮಾಡುವ ಗುಣ ಹೊಂದಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ಹೀಗೆಯೇ ಹೇಳುತ್ತಾ ಹೋಗುತ್ತಿದ್ದರೆ ಬುದ್ಧಕ್ಕೂ ಬದಲಿಗೆ ಧಮ್ಮಕ್ಕೆ ಆದ್ಯತೆ ಕೊಡುತ್ತಿದ್ದರೆ ಅಥವಾ ಬುದ್ಧನನ್ನು ತಲುಪಿಸುವ ಮುನ್ನ ವ್ಯಕ್ತಿಯೋರ್ವನಲ್ಲಿ ಧಮ್ಮವನ್ನು ಹುಡುಕುತ್ತಿದ್ದರೆ ಬೌದ್ಧ ಧರ್ಮ ಬೆಳೆಯುವುದಾದರೂ ಹೇಗೆ?
ಮೂರನೆಯ ಹಂತವನ್ನೂ ಹೇಳುವುದಾದರೆ ಮೂರನೆಯ ಹಂತ ಅದು ಸಂಘ. ಹದಿನೈದು ವರ್ಷಗಳ ಹಿಂದಿನ ವಯಕ್ತಿಕ ಘಟನೆಯೊಂದನ್ನು ಹೇಳುವುದಾದರೆ ಹದಿನೈದು ವರ್ಷಗಳ ಹಿಂದೆ ನಾನು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದವನಾಗಿದ್ದರೂ ಭಿಕ್ಕು ಒಬ್ಬರಿಗೆ ಗೌರವ ಕೊಟ್ಟಿರಲಿಲ್ಲ. ಯಾಕೆಂದರೆ ಮತಾಂತರ ಹೊಂದಿದ್ದರೂ ನನ್ನಲ್ಲಿ ಬುದ್ಧ ನೆಲೆಸಿರಲಿಲ್ಲ ಧಮ್ಮವಂತು ಇರಲೇ ಇಲ್ಲ.
ಆ ಕಾರಣದಿಂದ ಬುದ್ಧ, ಧಮ್ಮ , ಸಂಘ ... ಇದು ವ್ಯಕ್ತಿಗಳಲ್ಲಿ ಹಂತ ಹಂತವಾಗಿ ನೆಲೆಗೊಳ್ಳಬೇಕು. ಕೆಲವರಲ್ಲಿ ತಕ್ಷಣ ನೆಲೆಗೊಳ್ಳಬಹುದು. ಕೆಲವರಲ್ಲಿ ನಿಧಾನಕ್ಕೆ ನೆಲೆಗೊಳ್ಳಬಹುದು. ಆದರೆ ಆಗಬೇಕಾದ ಕೆಲಸವೆಂದರೆ ಎಲ್ಲರನ್ನೂ ಬುದ್ಧಯಾನದಲ್ಲಿ ಜೊತೆಯಾಗಿ ತೆಗೆದುಕೊಳ್ಳುವ ಕೆಲಸ. ಎಲ್ಲರನ್ನೂ ಅಂದರೆ ಕೂಲಿ ಮಾಡುವ ಶೋಷಿತ ಸಮುದಾಯದ ಪೌರಕಾರ್ಮಿಕ, ಕಟ್ಟಡ ಕಾರ್ಮಿಕನಿಂದ ಹಿಡಿದು ಐಎಎಸ್ ಆಫೀಸರ್ ವರೆಗೆ. ಯಾರೋ ಒಂದಿಬ್ಬರು ಸರ್ಕಾರಿ ನೌಕರರ, ಅವರ ಕುಟುಂಬಸ್ಥರ ಧಮ್ಮ ಇದಾದರೆ ಅಂದರೆ ಬೌದ್ಧ ಧರ್ಮವಾದರೆ ಅದಕ್ಕೆ ವ್ಯಾಪಕತೆಯಾದರೂ ವಿಸ್ತಾರವಾದರೂ ಎಲ್ಲಿ ದೊರಕುತ್ತದೆ? ಆದ್ದರಿಂದ ಆಗಬೇಕಾದ್ದು ಮೊದಲು ವ್ಯಕ್ತಿಗಳಲ್ಲಿ ಬುದ್ಧ ನೆಲೆಸುವ ಕಾರ್ಯ. ನಂತರ ಆತನಿಗೆ ಧಮ್ಮ ಬೋಧಿಸುವ ಕೆಲಸ.
ಧಮ್ಮ ಅರಿತ ಮನುಷ್ಯ ಸಹಜವಾಗಿ ಸಂಘಕ್ಕೆ ಗೌರವ ಕೊಡುತ್ತಾನೆ. ಆದರೆ ಯಾವುದೇ ಕಾರಣಕ್ಕೂ ವ್ಯಕ್ತಿಗಳಲ್ಲಿ ಮೊದಲು ಧಮ್ಮ ಹುಡುಕಬಾರದು. ಅದು ಅಪಾಯಕಾರಿ ಮತ್ತು ಬುದ್ಧ ಧರ್ಮಕ್ಕೆ ಅದು ವ್ಯತಿರಿಕ್ತ ಪರಿಣಾಮ (reverse effect) ಉಂಟುಮಾಡುವಂತದ್ದು. ವಿಶೇಷವಾಗಿ ಇಂತಹ ತಪ್ಪು ಮಾಡುವಂತಹವರು ಈಗಾಗಲೇ ಬುದ್ಧನನ್ನು ಸ್ವೀಕರಿಸಿ ಧಮ್ಮವನ್ನು ಕಲಿಯುತ್ತಿರುವವರು ಮಾಡುವಂತಹದ್ದು. ಅಂದರೆ ತಮ್ಮಲ್ಲಿ ಇರುವ ಧಮ್ಮವನ್ನು ಇತರರಲ್ಲಿ ಅಂದರೆ ಬುದ್ಧನನ್ನೇ ಹೊಂದದವರಲ್ಲಿ ಹುಡುಕುವುದು. ಆ ಮಾದರಿಯಲ್ಲಿಯೇ ಬುದ್ಧನನ್ನು ಪ್ರಚಾರ ಮಾಡುವುದು ಅಥವಾ ಬುದ್ಧ ಧರ್ಮ ಹೀಗೆಯೇ ಎಂದು ಪ್ರತಿಪಾದಿಸುವುದು. ಖಂಡಿತ, ಇದು ಅಪಾಯಕಾರಿ ವಿಧಾನ.
ಬದಲಿಗೆ ಬುದ್ಧನನ್ನು, ಬುದ್ಧ ಸಂಪ್ರದಾಯವನ್ನು ಮೊದಲು ಜನಸಾಮಾನ್ಯರಿಗೆ ಆಚರಿಸುವುದ ಕಲಿಸಬೇಕು ಅದೂ ನಿರಂತರವಾಗಿ ನಿಯಮಿತವಾಗಿ. ಹೇಗೆಂದರೆ ಅವರ ಬುಡಕಟ್ಟು ಆಚರಣೆ, ಹಳ್ಳಿ ಸಂಪ್ರದಾಯವೆಲ್ಲ ಅಂತಹ ಬುದ್ಧಾಚರಣೆಯಲ್ಲಿ ಮರೆಯಾಗುವ ಮಟ್ಟಿಗೆ. ನಂತರ ಆತನಿಗೆ ಆತ ಶಿಕ್ಷಣ ಪಡೆದ, ಅರ್ಥಾತ್ ಅಕ್ಷರ ಅರ್ಥ ಮಾಡಿಕೊಳ್ಳಬಲ್ಲನಾದರೆ ವಿಪಸ್ಸನ ಧ್ಯಾನ ಇದನ್ನೆಲ್ಲ ಕಲಿಸಬೇಕು. ಅಕಸ್ಮಾತ್ ಆತನ ಶಿಕ್ಷಣ ಮಟ್ಟ ಅಥವಾ ಅರಿವಿನ ಮಟ್ಟ ಧಮ್ಮವನ್ನು ಅರಿಯುವ ಮಟ್ಟಕ್ಕೆ ಬರಲಿಲ್ಲ ಎಂದರೆ ಆತನನ್ನು ಬುದ್ಧನ ಆಚರಣೆಗಳಿಗಷ್ಟೆ ಸೀಮಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಆತನಿಗೆ ನೀನು ಧಮ್ಮ ಕಲಿತಿಲ್ಲ ಧಮ್ಮದಲ್ಲಿ ಇರಲು ನೀನು ಯೋಗ್ಯನಲ್ಲ ಎಂದು ಆರೋಪ ಮಾಡುವಂತಾಗಬಾರದು. ಯಾಕೆಂದರೆ ಧಮ್ಮದಲ್ಲಿ ಕೆಲವರು ಪಿಹೆಚ್‌ಡಿ ಮಾಡಬಹುದು ಕೆಲವರು ಎಲ್ ಕೆ ಜಿ ಮಟ್ಟದಲ್ಲಿಯೇ ಉಳಿದುಬಿಡಬಹುದು ಇದು ಅವರವರ ಜ್ಞಾನದ ಮಟ್ಟಕ್ಕೆ ಪರಿಸ್ಥಿತಿಗೆ ಸಂಬಂಧಿಸಿದ ಅಂಶ.
ಹಾಗೆಯೇ ಸಂಘವೂ ಅಷ್ಟೇ, ಬುದ್ಧ ಮತ್ತು ಧಮ್ಮ ಅರಿತ ಮನುಷ್ಯ ಸಂಘಕ್ಕೆ ಗೌರವ ಕೊಟ್ಟೇ ಕೊಡುತ್ತಾನೆ. ಅದು ಬಿಟ್ಟು, ಈಗಾಗಲೇ ಬುಡಕಟ್ಟು ಸಂಪ್ರದಾಯಗಳನ್ನು ಸಾವಿರಾರು ವರ್ಷಗಳಿಂದ ಆಚರಿಸುತ್ತಿರುವವರನ್ನು ಬೌದ್ಧ ಧರ್ಮಕ್ಕೆ ಸೇರಿಸಿಕೊಂಡು ನೀನು ಭಿಕ್ಕುಗಳಿಗೆ ಗೌರವ ಕೊಡುತ್ತಿಲ್ಲ ನೀನು ಬುದ್ಧ ವಿರೋಧಿ ಎನ್ನುವುದು ಕೂಡ ತಪ್ಪಾಗುತ್ತದೆ.
ಬುದ್ಧ ಧಮ್ಮ ಎಂದರೆ ಅದು ಪರಿವರ್ತನೆ. ಅದು ದಿಢೀರನೆ ಆಗುವಂತಹದ್ದಲ್ಲ ಹಂತ ಹಂತವಾಗಿ ಆಗುವಂತಹದ್ದು. ಹಾಗೆಯೇ ನಾವು ಬುದ್ಧ ಧರ್ಮವನ್ನು ಈಗ ವಿಶೇಷವಾಗಿ ಶೋಷಿತ ಸಮುದಾಯಗಳ ನಡುವೆ ಬೆಳೆಸುತ್ತಿರುವುದು ಧರ್ಮರಹಿತ ಸ್ಥಿತಿಯಿಂದ. ಹೀಗಿರುವಾಗ ಅಂತಹವರಿಂದ ದಿಢೀರ್ ಬದಲಾವಣೆ, ಶಿಸ್ತು, ಫಲಿತಾಂಶ ಬಯಸುವುದು? ಖಂಡಿತ, ಅದು ತಪ್ಪು ಪರಿಕಲ್ಪನೆ ಆಗುತ್ತದೆ. ಶೋಷಿತ ಸಮುದಾಯಗಳ ಸಾಮಾಜಿಕ ವಾತಾವರಣದಲ್ಲಿ ಬೌದ್ಧ ಧರ್ಮ ಹರಡುವ ತಪ್ಪು ವಿಧಾನ ಅದಾಗುತ್ತದೆ. ಈ ನಿಟ್ಟಿನಲ್ಲಿ ಮೊದಲು ಬುದ್ಧ, ನಂತರ ಹಂತಹಂತವಾಗಿ ಧಮ್ಮ, ನಂತರ ಸಂಘ ಎಂದುಕೊಂಡರೆ ಖಂಡಿತ ಬೌದ್ಧಧರ್ಮ ಯಶಸ್ವಿಯಾಗಿ ಮುನ್ನಡೆಯುತ್ತದೆ. ಬದಲಿಗೆ ಇಂತಹ ಸರಳ ವಾಸ್ತವ ಅರ್ಥ ಮಾಡಿಕೊಳ್ಳದೆ ಕೆಲವು ಸಿದ್ಧ ಮಾದರಿಯಲ್ಲಿ ಧಮ್ಮ ಹರಡುವ ಕ್ರಿಯೆ ಕೈಗೊಂಡರೆ ಅಥವಾ ಬೌದ್ಧಧರ್ಮ ವಿಶ್ಲೇಷಿಸಿದರೆ ಖಂಡಿತ ಅಲ್ಲಿ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತದೆ. ಬೌದ್ಧ ಧರ್ಮದ ಬೆಳವಣಿಗೆಗೆ ಅದು ನಿಸ್ಸಂಶಯವಾಗಿ ತಡೆಯಾಗುತ್ತದೆ ಎಂದು ನಿರ್ಭೀತಿಯಿಂದ ಹೇಳಬಹುದು.
Comments
Post a Comment