-ರಘೋತ್ತಮ ಹೊ.ಬ
ನಿನ್ನ ತುಳಿಯಲು ಅಲ್ಲಿ
ಬಲೆ ನೇಯ್ದಿಹರು ಬಯಲಲ್ಲಿ
ಸಂಜೆ ಅಲ್ಲಿಗೆ
ಜೀತ ಮಾಡಲು ಹೋಗುವೆಯಾ
ನಿನ್ನ ಊರಾಚೆ ಇಡಲು
ಕತೆ ಕಟ್ಟುತಿಹರು ಅಲ್ಲಿ
ಅರಿಯದೆ ನೀ ಕುಡಿದು ಕಣ್ಮುಚ್ಚುವೆಯಾ
ನಿನ್ನ ಅಕ್ಕ ತಂಗಿಯರ
ದೇವದಾಸಿಯರ ಮಾಡಲು ಅಲ್ಲಿ
ಮಂತ್ರ ತಂತ್ರ ಕುತಂತ್ರ
ಮಾಡುತಿಹರು ಅಲ್ಲಿ ಅರಿಯದೆ ನೀ
ಮತ್ತೆ ದಾಸನಾಗುವೆಯಾ
ಆಕೆಯ ದಾಸಿಯಾಗಿಸುವೆಯಾ
ನಿನ್ನ ಏಳಿಗೆ ತುಳಿಯಲು
ತರ್ಕ ಕುತರ್ಕ ವಿತಂಡವಾದಗೈಯುತಿಹರು ಅಲ್ಲಿ
ತಿಳಿಯದೆ ಮತ್ತೆ ನೀ
ತುಳಿತಕ್ಕೊಳಗಾಗುವೆಯಾ
ಸಂಜೆಗಿಟ್ಟಿಲ್ಲದಿದ್ದರು ಕಂದ
ತಂದೆ ಅಂಬೇಡ್ಕರರ ಓದು
ತಂಗಾಳಿಯ ತುಂಬಿಕೊ
ಆತ್ಮಗೌರವವ ಹೃದಯಕ್ಕೆ ಸೆಳೆದುಕೊ
ಮತ್ತೆ ಮತ್ತೆ ನೆನೆದುಕೊ
ಆ ನಿನ್ನ ತಾತ ಮುತ್ತಾತರ
ಗುಲಾಮಗಿರಿಯ ನೆನಹ
ಬಡವನಾದರೇನು ಮತ್ತೆ
ಮುಟ್ಟದಿರು ಶೌಚಾಲಯದ
ಪೊರಕೆಯ
ಹೊಟ್ಟೆಗಿಲ್ಲದಿದ್ದರೂ ಮುಟ್ಟದಿರವರ
ಚಪ್ಪಲಿಯ ಹೊಲಿಯಲು
ಅಕ್ಷರದ ಹೂವಾಗು
ಬುದ್ಧನಾಗು ಸ್ವಾಭಿಮಾನದ ಜ್ಯೋತಿಯಾಗು
ನಿನಗೆ ನೀನೆ ಬೆಳಕಾಗು
ನಿನಗೆ ನೀನೆ ಬೆಳಕಾಗು
Comments
Post a Comment