Skip to main content

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

 

ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!

      ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

      ಹಾಗಿದ್ದರೆ ಅಸ್ಪೃಶ್ಯರ ಉದ್ಧಾರವನ್ನು, ಸಂವಿಧಾನ ರಚನೆಯನ್ನು ಹೊರತುಪಡಿಸಿ ಅಂಬೇಡ್ಕರರ ಇನ್ನೆನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾಸಾಹೇಬ'ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ' ರನ್ನೂ, ಠಾಗೋರ್ ಎಂಬ ‘ಗುರುದೇವ್' ರನ್ನೂ, ನೆಹರೂ ಎಂಬ ‘ಚಾಚಾ'ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್. ಈ ದೇಶದ ಮಹಿಳೆಯರಿಗೆ ‘ಹಿಂದೂ ಸಂಹಿತೆ ಮಸೂದೆ'ಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ  ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ{ಆರ್.ಬಿ.ಐ} ಸ್ಥಾಪಿಸಲು ಕಾರಣರಾದದ್ದು ಕೂಡ ಅಂಬೇಡ್ಕರರೇ.  ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೊಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ  ರೂಪಿಸಿದ್ದು... ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೆ!

      ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೇ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ "ಪುನರುಜ್ಜೀವನ  ಸಮಿತಿ ಸಭೆ" ಬ್ರಿಟಿಷ್ ಗವರ್ನರ್ ಜನರಲ್ ರವರಿಂದ ರಚಿಸಲ್ಪಟ್ಟಿತು. ಅಂಬೇಡ್ಕರ್ ರವರು ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ "ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂಪಣಾ ಸಮಿತಿ'ಯ ಜವಾಬ್ದಾರಿಯನ್ನು  ವಹಿಸಲಾಯಿತು. ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ರವರು ಅದ್ಭುತವಾದ ಸಾಧನೆ ಮಾಡಿದ್ದಾರೆ. 1942 ರಿಂದ 1946 ರವರೆಗೆ ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ, ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್ ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ! ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ , ಹಿರಾಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿ ಗೊಳಿಸಿದ್ದು ಮತ್ತು  ಇಂತಹ ಬೃಹತ್ ನಿರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಅವರು 1944 ರಲ್ಲೆ 'ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗವನ್ನು ಸ್ಥಾಪಿಸಿದ್ದು.ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ರವರು ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೆನೂ ಅಲ್ಲ. ದುರಂತವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

  ಇರಲಿ ಅಂಬೇಡ್ಕರ್ ರ ಮತ್ತೊಂದು ಸಾಧನೆಯನ್ನು ಹೇಳಲೇ ಬೇಕು. ಅದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ' ಎಂಬ ಕೃತಿಯಲ್ಲಿ  ಖ್ಯಾತ ಚಿಂತಕ ಸುಖದೇವ್ ಥೋರಟ್‍ರವರು ಇದನ್ನು ದಾಖಲಿಸುತ್ತಾರೆ. "ಆರ್. ಬಿ. ಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ "ಹಿಲ್ಟನ್ ಯಂಗ್ ಆಯೋಗ'ದ ಮುಂದೆ ಅಂಬೇಡ್ಕರ್ ರವರು ಆರ್.ಬಿ.ಐ.ನ ಮಾರ್ಗದರ್ಶಿಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ. ತನ್ಮೂಲಕ ಆರ್.ಬಿ.ಐ. ನ ಸ್ಥಾಪನೆಗೆ ಕಾರಣರಾಗುತ್ತಾರೆ" ಎನ್ನುತ್ತಾರೆ ಸುಖದೆವ್ ಥೊರಟ್. ಕುತೂಹಲಕಾರಿ ಅಂಶವೆಂದರೆ 'ಹಿಲ್ಟನ್ ಯಂಗ್' ಅಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ರವರು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್'ಗಾಗಿ ‘ಡಿ.ಎಸ್‍ಸಿ' ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ' ಎಂಬ ಕೃತಿಯಿತ್ತು. ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದನ್ನು ಗಮನಿಸಿ ಅಂಬೇಡ್ಕರ್ ರವರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳುತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

 ಮತ್ತೊಂದು ವಿಷಯ ಇಲ್ಲಿ ಹೇಳಲೆಬೇಕಾಗಿದೆ . ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೇ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್ ರವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ , ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್ ರವರ ಕೊಡುಗೆಯಾದರೂ ಏನು? ಎಂಬುದು. ಖಂಡಿತ ಏನೂ ಇಲ್ಲ. ಎಸ್.ಬಿ.ಐ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ  ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‍ ರಿಂದ "ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು"ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ||ಅಂಬೇಡ್ಕರ್ ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು! ದುರಂತವೆಂದರೆ ಅಸ್ಪ್ರಶ್ಯತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿತಾಸಕ್ತಿಗಳಿಗೆ ಅಂಬೇಡ್ಕರರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್' ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!

         ಇನ್ನು ಈ ನಡುವೆ ಅಂತರ್ ರಾಜ್ಯ ಸಮಸ್ಯೆಗಳ ಬಗ್ಗೆ ಅಂಬೇಡ್ಕರ್ ರವರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955 ರಲ್ಲೆ ಅಂಬೇಡ್ಕರ್ ರವರು ತಮ್ಮ "ಭಾಷಾವಾರು ಪ್ರಾಂತ್ಯಗಳ ಬಗೆಗಿನ ಆಲೋಚನೆಗಳು' ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ  ನೀಡುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾದದ್ದು. ಯಕೆಂದರೆ 2000 ದಲ್ಲಿ ಮದ್ಯಪ್ರದೇಶದಿಂದ ಛತ್ತೀಸಗಢ ಮತ್ತು ಬಿಹಾರದಿಂದ ಜಾರ್ಖಂಡ್‍ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್ ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)

     ಸಿಂಪಲ್ಲಾಗಿ ಹೇಳುವುದರೆ ಅಂಬೇಡ್ಕರ್ ರನ್ನು ಕೇವಲ ದಲಿತರ ಉದ್ಧಾರಕ ಎಂದು ಮಾತ್ರ ನೋಡಲಾಗಿದೆ. ತನ್ಮೂಲಕ ಅವರ ಇತರ ಅದ್ಭುತ ಸಾಧನೆಗಳನ್ನು ನಿಕೃಷ್ಟವಾಗಿ ಮುಚ್ಚಿಡಲಾಗಿದೆ. ಅಂತಹ ಮುಚ್ಚಿಡುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದರೆ ಅಚ್ಚರಿಯಾಗಬಹುದು. ಉದಾಹರಣೆಗೆ ರಾಜ್ಯಸರ್ಕಾರದ ಪಠ್ಯ ಪುಸ್ತಕವೊಂದರಲ್ಲಿ ಸಂವಿಧಾನ ರಚನೆ ಬಗೆಗಿನ ಅಧ್ಯಾಯದಲ್ಲಿ ಡಾ||ಬಾಬು ರಾಜೇಂದ್ರ ಪ್ರಸಾದರನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರೆಂದೂ (ನೆನಪಿರಲಿ constituent assembly ಎಂಬುದನ್ನು ‘ಸಂವಿಧಾನ ಸಭೆ' ಎಂದು ಅನುವಾದಿಸಬೇಕಿತ್ತು.  ಆದರೆ ಗೊಂದಲ ಮೂಡಿಸಲು ಅದನ್ನು ‘ಸಂವಿಧಾನ ರಚನಾಸಭೆ' ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಲಾಗಿದೆ ಎಂದೆನಿಸುತ್ತದೆ!) ಮತ್ತು ಡಾ||ಅಂಬೇಡ್ಕರರನ್ನು ಕರಡು ಸಮಿತಿಯ (ಇದನ್ನು ಸರಿಯಾಗಿ ಅನುವಾದಿಸಲಾಗಿದೆ!) ಅಧ್ಯಕ್ಷರೆಂದು ಉಲ್ಲೇಖಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಕೇವಲ ರಾಜೇಂದ್ರ ಪ್ರಸಾದರ ಚಿತ್ರವನ್ನು ಮಾತ್ರ ಮುದ್ರಿಸಲಾಗಿದೆ, ಅಂಬೇಡ್ಕರ್ ಭಾವಚಿತ್ರ ಮಾತ್ರ ಇಲ್ಲ! ರಾಜೇಂದ್ರ ಪ್ರಸಾದರ ಆ ಚಿತ್ರವನ್ನು ನೋಡಿದ ಯಾರಾದರೂ ಅಂಬೇಡ್ಕರರನ್ನು 'ಸಂವಿಧಾನ ಶಿಲ್ಪಿ' ಎನ್ನುತ್ತಾರೆಯೆ? ಖಂಡಿತ ಇಲ್ಲ. ‘ಬಾಬು ರಾಜೇಂದ್ರ ಪ್ರಸಾದರ ಚಿತ್ರದ ಹಿಂದೆ' ಅಂಬೇಡ್ಕರರನ್ನು ‘ಮುಚ್ಚುವ ಕ್ರೂರ ಪ್ರಯತ್ನವಿದಲ್ಲದೆ ಬೇರೆನೂ ಅಲ್ಲ!       

 ಹಾಗಿದ್ದರೆ ಅಂಬೇಡ್ಕರ್ ರನ್ನು ಹೀಗೆ ಮುಚ್ಚಿಡುವ ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ, ಒಂದು ಬೃಹತ್ ಸಮುದಾಯವನ್ನು ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು. ‘ನಮಗೇಕೆ ಇದನ್ನು ಹೇಳಲಿಲ್ಲ' ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಷ್ಟೆ.

Comments

  1. ಸರ್ ನಿಮ್ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಜ ಇತಿಹಾಸ ತಿಳಿದುಕೊಂಡಿದ್ದೇವೆ. ಇವಾಗ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅದೇನೆಂದರೆ ಈ ನೈಜ ಇತಿಹಾಸವನ್ನು ನನ್ನ ಮುಂದಿನ ಪೀಳಿಗೆಗೆ ತಲುಪಿಸುವುದು. ಅದನ್ನು ನಾನು ಮಾಡುತ್ತೇನೆ. ಹಾಗೆಯೇ ಆ ಮುಂದಿನ ಪೀಳಿಗೆ ತನ್ನ ಮುಂದಿನ ಪೀಳಿಗೆಗೆ ತಲುಪಿಸುವುದು ಅವರ ಮೇಲೆ ಇರುವ ಅತೀ ದೊಡ್ಡ ಜವಾಬ್ದಾರಿವೂ ಆಗಿದೆ. ಹೀಗೆ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಂಥನ ಮಾಡುವ ಮೂಲಕ ಅವರನ್ನು ಪುನಹ ಪುನಹ ವೈಚಾರಿಕವಾಗಿ ಜೀವಂತವಾಗಿರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು " ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತೆ ಹುಟ್ಟಿ ಬನ್ನಿ....! "(ಅಂದರೆ ದೈಹಿಕವಾಗಿ ಅವರನ್ನು ಜೀವಂತವಾಗಿರಿಸಲು ನಮ್ಮಿಂದ ಯಾವತ್ತಿಗೂ ಸಾಧ್ಯವಿಲ್ಲ. ಆದ್ದರಿಂದ ವೈಚಾರಿಕವಾಗಿ ಜೀವಂತವಾಗಿರಬೇಕು ಎಂಬುದೇ ನನ್ನ ಆಶಯ) ಎಂದು ಹೇಳದೆ ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಜೀವ ಕಳೆ ತುಂಬುವ ಜವಾಬ್ದಾರಿ ನನ್ನ ಮೇಲೆ ಇದೆ.....
    ಈ ಮೌಲ್ವಿಕ ವಿಚಾರಧಾರೆಗಳನ್ನು ತಿಳಿಸಿದ್ದಕ್ಕಾಗಿ ತಮಗೆ ಹೃದಯಸ್ಪರ್ಶಿ ಜೈ ಭೀಮ್ ವಂದನೆಗಳು ಸರ್

    ReplyDelete
    Replies
    1. ಜೈಭೀಮ್ ನಮೋ ಬುದ್ಧಾಯ

      Delete

Post a Comment

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...