1954 ಡಿಸೆಂಬರ್ 4 ರಂದು ಬರ್ಮಾದ ರಂಗೂನ್ ನಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತದೆ. ಆ ಸಮ್ಮೇಳನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ಮುಖ್ಯ ಅತಿಥಿಯಾಗಿರುತ್ತಾರೆ. ಆ ಸಂದರ್ಭದಲ್ಲಿ ಬೌದ್ಧ ಶಾಸನ ಕೌನ್ಸಿಲ್ ನಲ್ಲಿ ಅವರು ಭಾರತದಲ್ಲಿ ಬೌದ್ಧ ಧರ್ಮ ಬೆಳೆಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ವಿವರಿಸಲು ಸಭೆಗೆ ನೀಲನಕ್ಷೆ ಮಾದರಿಯಲ್ಲಿ ಒಂದು ಮನವಿ ಪತ್ರ ಸಲ್ಲಿಸುತ್ತಾರೆ. ಆ ನೀಲನಕ್ಷೆಯ ಮುಖ್ಯಾಂಶಗಳನ್ನು ದಾಖಲಿಸುವುದಾದರೆ,
ಮೊದಲಿಗೆ ಬಾಬಾಸಾಹೇಬ್ ಅಂಬೇಡ್ಕರರು ಹೇಳುವುದು ಮತಾಂತರ ಹೊಂದಿದವರಿಗೆ ಅಗತ್ಯವಾಗಿರುವ ಒಂದು ಬೌದ್ಧ ಧರ್ಮಗ್ರಂಥದ ಬಗ್ಗೆ. ಈ ನಿಟ್ಟಿನಲ್ಲಿ ಕ್ರೈಸ್ತ ಧರ್ಮ ಹೋಲಿಸುವ ಅವರು ಕ್ರೈಸ್ತ ಧರ್ಮ ಬೆಳೆಯಲು ಕಾರಣ ಅವರಲ್ಲಿ ಇರುವ ಬೈಬಲ್ ನಂತಹ ಯಾರಾದರೂ ಸುಲಭವಾಗಿ ಇಟ್ಟುಕೊಳ್ಳಬಹುದಾದ ಸಣ್ಣ ಪುಸ್ತಕ. ಆದರೆ ಬೌದ್ಧ ಧರ್ಮಕ್ಕೆ ಅಂತಹ ಅನುಕೂಲ ಇಲ್ಲ ಎನ್ನುತ್ತಾರೆ. ಇದಕ್ಕೆ ಅವರು ಕೊಡುವ ಕಾರಣ ಸಾಮಾನ್ಯ ಅನುಯಾಯಿಯೊಬ್ಬ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪಾಳಿ ಭಾಷೆಯ 73 ಆ ಬೃಹತ್ ಸಂಪುಟಗಳನ್ನು ಓದಲಾರ ಎಂಬುದು. ಖಂಡಿತ, ಬಾಬಾಸಾಹೇಬರು ಹೇಳುವಂತೆ 73 ಆ ಬೃಹತ್ ಸಂಪುಟಗಳನ್ನು ಸಾಮಾನ್ಯ ಓದುಗನಿರಲಿ ಪಂಡಿತರೂ ಕೂಡ ಓದಲಾರರು. ಈ ನಿಟ್ಟಿನಲ್ಲಿ ಬೈಬಲ್ ಮಾದರಿಯಲ್ಲೇ ಬೌದ್ಧಧರ್ಮಕ್ಕೂ ಧರ್ಮ ಗ್ರಂಥವೊಂದನ್ನು ತಯಾರಿಸುವ ಇಂಗಿತ ವ್ಯಕ್ತಪಡಿಸುವ ಬಾಬಾಸಾಹೇಬರು ಆ ಗ್ರಂಥದಲ್ಲಿ ಬುದ್ಧನ ಸಾಮಾಜಿಕ ಮತ್ತು ನೈತಿಕ ನಿಲುವಿಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯತೆ ಹೇಳುತ್ತಾರೆ. ಯಾಕೆಂದರೆ ಅವರು ಹೇಳುವುದು ಇದುವರೆಗೂ ಬೌದ್ಧ ಗ್ರಂಥಗಳಲ್ಲಿ ಆದ್ಯತೆ ಕೊಟ್ಟಿರುವುದು ಧ್ಯಾನ, ಚಿಂತನೆ ಮತ್ತು ಅಭಿಧಮ್ಮಕ್ಕೆ. ಈ ದಿಸೆಯಲ್ಲಿ ಈ ಮಾದರಿಯಲ್ಲಿ ಅಂದರೆ ಧ್ಯಾನ, ಚಿಂತನೆ ಮತ್ತು ಅಭಿಧಮ್ಮದ ಮಾದರಿಯಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಹರಡುವುದನ್ನು ಮುಂದುವರೆಸಿದ್ದೇ ಆದರೆ ಅದು ಅಕ್ಷರಶಃ ಬೌದ್ಧ ಧರ್ಮದ ಬೆಳವಣಿಗೆಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಅಂಬೇಡ್ಕರರು.
ಇನ್ನು ಎರಡನೇ ಅಂಶ ತಮ್ಮ ಆ ನೀಲನಕ್ಷೆಯಲ್ಲಿ ಬಾಬಾಸಾಹೇಬರು ಹೇಳುವುದು; ಬೌದ್ಧ ಧರ್ಮದಲ್ಲಿ ಸಾಮಾನ್ಯ ಅನುಯಾಯಿಗಳಿಗೆ ಕ್ರೈಸ್ತ ಧರ್ಮದ ಮಾದರಿಯಲ್ಲಿ ದೀಕ್ಷೆ ನೀಡುವ ಪದ್ಧತಿ ಆರಂಭಿಸುವ ಬಗ್ಗೆ. ಯಾಕೆಂದರೆ ಅವರು ಹೇಳುವುದು ಬೌದ್ಧ ಧರ್ಮದಲ್ಲಿ ಭಿಕ್ಕುಗಳಿಗೆ ಮಾತ್ರ ಈ ಥರದ ದೀಕ್ಷಾ ನೀಡುವ ಪದ್ಧತಿ ಇದ್ದು ಮತಾಂತರ ಆಗುವ ಸಾಮಾನ್ಯ ಅನುಯಾಯಿಗಳಿಗೆ ಅಂತಹ ಯಾವುದೇ ದೀಕ್ಷಾ ಪದ್ಧತಿ ಇಲ್ಲ ಎಂದು. ಈ ಹಿನ್ನೆಲೆಯಲ್ಲಿ ಎಷ್ಟೋ ಜನ ಬೌದ್ಧ ಧರ್ಮಕ್ಕೆ ಸೇರುತ್ತಾರದರೂ ಅಂತಹ ಒಂದು ದೀಕ್ಷಾ ಪದ್ಧತಿ ಇಲ್ಲದ್ದರಿಂದಾಗಿ ಇದ್ದಕ್ಕಿದ್ದಂತೆ ಅವರು ಬಿಟ್ಟು ಹೋಗುತ್ತಿದ್ದಾರೆ. ಆದ್ದರಿಂದ ಕ್ರೈಸ್ತ ದೀಕ್ಷೆಯ ಮಾದರಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೌದ್ಧ ಎನಿಸಿಕೊಳ್ಳಲು ಕಡ್ಡಾಯವಾಗಿ ಅಂತಹ ಒಂದು ದೀಕ್ಷೆ ಸ್ವೀಕರಿಸುವ ಅಗತ್ಯತೆ ಅವರು ಹೇಳುತ್ತ ಅಂತೆಯೇ ಒಂದು ಬೌದ್ಧ ದೀಕ್ಷಾ ಪದ್ಧತಿಯನ್ನು ಆರಂಭಿಸುವ ಬಗ್ಗೆ ಅಂಬೇಡ್ಕರ್ ರು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ. ಹಾಗೆಯೇ ಆ ದೀಕ್ಷೆಯಲ್ಲಿ ಕೇವಲ ಪಂಚಶೀಲ ಉಚ್ಛರಿಸಿದರಷ್ಟೆ ಸಾಲದು ಜೊತೆಗೆ ಅಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಬೇಕು ಹೇಗೆಂದರೆ ದೀಕ್ಷೆ ಸ್ವೀಕರಿಸಿದ ತಕ್ಷಣ ಆತನಲ್ಲಿ ತಾನು ಹಿಂದೂ ಎಂಬ ಮನೋಭಾವ ಹೋಗಬೇಕು ಆತ ಹೊಸ ಮನುಷ್ಯನಂತೆ ಆಗಬೇಕು ಎಂದು ಅಂಬೇಡ್ಕರರು ತಮ್ಮ ಆ ದೀಕ್ಷಾ ಪದ್ಧತಿ ಇರಬೇಕಾದ ರೀತಿಯನ್ನು ಹೇಳುತ್ತಾರೆ.
ಮುಂದುವರಿದು ಬೌದ್ಧ ಧರ್ಮ ಬೆಳವಣಿಗೆಯ ತಮ್ಮ ಆ ಬೃಹತ್ ಯೋಜನೆಯ ನೀಲನಕ್ಷೆಯಲ್ಲಿ ಅವರು ಹೇಳುವುದು ಬೌದ್ಧ ಧರ್ಮ ಬೋಧಕರ ಬಗ್ಗೆ. ಈ ನಿಟ್ಟಿನಲ್ಲಿ ಬೌದ್ಧ ಧರ್ಮ ಬೋಧಕರನ್ನು ನೇಮಿಸಿಕೊಳ್ಳಬೇಕೆನ್ನುವ ಅಂಬೇಡ್ಕರರು ಅಂತಹ ಬೋಧಕರು ಸಾಮಾನ್ಯ ಅನುಯಾಯಿಗಳಿಗೆ ಧಮ್ಮ ಬೋಧಿಸಬೇಕು ಮತ್ತು ಅನುಯಾಯಿಗಳು ಬುದ್ಧನ ಆ ಧಮ್ಮವನ್ನು ಹೇಗೆ ಪಾಲಿಸುತ್ತಿದ್ದಾರೆ ಎಂಬುದನ್ನೂ ಗಮನಿಸುತ್ತಿರಬೇಕು ಎನ್ನುತ್ತಾರೆ. ಹಾಗೆಯೇ ಆ ಬೋಧಕರಿಗೆ ಸಂಬಳ ನೀಡುವ ಅಗತ್ಯತೆ ಹೇಳುವ ಅಂಬೇಡ್ಕರರು ಮದುವೆಯಾಗಿರುವವರನ್ನು ಕೂಡ ಅಂತಹ ಬೌದ್ಧ ಧಮ್ಮ ಬೋಧಕ ವೃತ್ತಿಗೆ ನೇಮಿಸಿಕೊಳ್ಳಬಹುದು ಎನ್ನುತ್ತಾರೆ, ಜೊತೆಗೆ ಅಂತಹವರು ಆರಂಭದಲ್ಲಿ ಪಾರ್ಟ್ ಟೈಮ್ ವೃತ್ತಿ ಮಾಡುತ್ತಿದ್ದರು ಕೂಡ ತಪ್ಪೇನಿಲ್ಲ ಎನ್ನುತ್ತಾರೆ. ಅಂದರೆ ಬಾಬಾಸಾಹೇಬರ ಪ್ರಕಾರ ಅಂತಹ ಧಮ್ಮ ಬೋಧಕರು ತಮ್ಮ ಧಮ್ಮ ಬೋಧನೆಯ ಜೊತೆ ಜೊತೆಗೆ ತಮ್ಮ ಸಂಸಾರ ಮತ್ತು ತಮ್ಮ ವೃತ್ತಿಯನ್ನೂ ಕೂಡ ನಿರ್ವಹಿಸಬಹುದು.
ಮುಂದುವರಿದು ಬಾಬಾಸಾಹೇಬರು ಹೇಳುವುದು ಬೌದ್ಧ ಧಾರ್ಮಿಕ ಪೂಜಾ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ. ಅಂದಹಾಗೆ ಅಂತಹ ಶಾಲೆಗಳಲ್ಲಿ ಉದ್ದೇಶಿತ ಆ ಧಮ್ಮ ಬೋಧಕರು ಬೌದ್ಧ ಧರ್ಮವನ್ನು ಬೋಧಿಸಬಹುದು, ಅದರ ಜೊತೆಗೆ ಇತರ ಧರ್ಮಗಳನ್ನು ಬೌದ್ಧ ಧರ್ಮದ ಜೊತೆಗೆ ಹೋಲಿಸಿ ಧಮ್ಮದ ಅಧ್ಯಯನ ಮಾಡಬಹುದು ಎನ್ನುತ್ತಾರೆ.
ಈ ಸಂದರ್ಭದಲ್ಲಿ ಬಾಬಾಸಾಹೇಬರು ಒಂದು ಪ್ರಮುಖ ವಿಚಾರ ಪ್ರಸ್ತಾಪಿಸುತ್ತಾರೆ. ಅದು ವಿಹಾರದಲ್ಲಿ ಪ್ರತಿ ಭಾನುವಾರ ಬೌದ್ಧ ಪೂಜಾ ಸಂಪ್ರದಾಯವೊಂದನ್ನು ಆರಂಭಿಸುವ ಬಗ್ಗೆ. ಅಂದಹಾಗೆ ಅಂತಹ ಪೂಜೆಯ ನಂತರ ಧಮ್ಮ ಪ್ರವಚನ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.
ಬಾಬಾಸಾಹೇಬ್ ಅಂಬೇಡ್ಕರ ಈ ನೀಲನಕ್ಷೆಯಂತೆ ಒಂದು ಬೌದ್ಧ ಧರ್ಮ ಗ್ರಂಥ ರಚಿಸುವುದು, ಒಂದು ಬೌದ್ಧ ದೀಕ್ಷಾ ಪದ್ಧತಿ ಸೃಷ್ಟಿಸುವುದು, ಬೌದ್ಧ ಬೋಧಕರನ್ನು ನೇಮಿಸಿಕೊಳ್ಳುವುದು ಮತ್ತು ಪೂಜಾ ಪದ್ಧತಿಯೊಂದನ್ನು ಪ್ರಾರಂಭಿಸಿ ಪ್ರತಿ ಭಾನುವಾರ ಬೌದ್ಧ ಅನುಯಾಯಿಗಳು ಅಂತಹ ವಾರದ ಪ್ರಾರ್ಥನೆಯಲ್ಲಿ ಕಡ್ಡಾಯ ವಾಗಿ ಪಾಲ್ಗೊಳ್ಳುವಂತೆ ಮಾಡುವುದು ಅವರ ಆ ಮಹತ್ವದ ಯೋಜನೆ ಮತ್ತು ಯೋಚನೆಯಾಗಿತ್ತು.
ಹಾಗಿದ್ದರೆ ಧಮ್ಮ ಬೆಳೆಸಲು ಇದಿಷ್ಟೇ ಸಾಕೆ? ವಿಹಾರಗಳು ಬೇಡವೆ? ಇದಕ್ಕೂ ತಮ್ಮ ನೀಲನಕ್ಷೆಯಲ್ಲಿ ಹೇಳುವ ಬಾಬಾಸಾಹೇಬರು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ದೊಡ್ಡ ದೊಡ್ಡ ಬೌದ್ಧ ದೇಗುಲಗಳನ್ನು ವಿಹಾರಗಳನ್ನು ನಿರ್ಮಿಸುವ ವಿಚಾರ ಪ್ರಸ್ತಾಪಿಸುತ್ತಾರೆ. ಹಾಗೆಯೇ ಮಿಶನರಿ ಮಾದರಿಯಲ್ಲಿ ಈ ನಾಲ್ಕು ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಕೂಡ ಬಾಬಾಸಾಹೇಬರು ತಮ್ಮ ಆ ನಕ್ಷೆಯಲ್ಲಿ ಹೇಳುತ್ತಾರೆ. ಮುಂದುವರಿದು ಎಲ್ಲಾ ಧರ್ಮದವರಲ್ಲಿ ಬೌದ್ಧ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಬೌದ್ಧ ಧರ್ಮದ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ, ಗೆದ್ದವರಿಗೆ ಬಹುಮಾನ ನೀಡುವ ಮಾತನ್ನೂ ಬಾಬಾಸಾಹೇಬರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ
ಬೌದ್ಧ ಧರ್ಮ ಪುನರುತ್ಥಾನಕ್ಕೆ ತಾನು ಹೀಗೆ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದೇನೆ ಮತ್ತು ಮುಂದೆಂದೂ ಅದು ಭಾರತದಿಂದ ಕಾಣೆಯಾಗದಂತೆ ನಾನು ಎಚ್ಚರಿಕೆ ವಹಿಸುವುದಾಗಿ ಬರ್ಮಾದ ಆ ಅಂತರರಾಷ್ಟ್ರೀಯ ಸಭೆಗೆ ಅವರು ತಿಳಿಸುತ್ತಾರೆ.
ನಿಜ ಹೇಳಬೇಕೆಂದರೆ ಅಂಬೇಡ್ಕರರು ಹಾಕಿಕೊಂಡಿದ್ದ ಈ ನೀಲ ನಕ್ಷೆ ಕಾರ್ಯ ರೂಪಕ್ಕೆ ಬಂದಿದ್ದರೆ ಖಂಡಿತ ಭಾರತದಲ್ಲಿ ಬೌದ್ಧ ಧರ್ಮ ಅಕ್ಷರಶಃ ಪುನರುಜ್ಜೀವನ ಗೊಂಡಿರುತ್ತಿತ್ತು. ಆದರೆ ದುರಂತ ಎಂದರೆ ಅವರು ಆ ನೀಲನಕ್ಷೆ ತಯಾರಿಸಿದ ಎರಡೇ ವರ್ಷದಲ್ಲಿ ಪರಿನಿಬ್ಬಾಣ ಹೊಂದಿದ್ದರು. ಈ ನಡುವೆ ಮತ್ತೂ ದುರಂತವೆಂದರೆ ಬಾಬಾಸಾಹೇಬರ ಅನುಯಾಯಿಗಳಿಗೆ ಅದನ್ನು ಅಂದರೆ ಬೌದ್ಧ ಧರ್ಮವನ್ನು ಪುನರುಜ್ಜೀವನ ಗೊಳಿಸುವ ಮಾತಿರಲಿ ಅಂಬೇಡ್ಕರರು ಹಾಕಿ ಕೊಂಡಿದ್ದ ಆ ನೀಲನಕ್ಷೆಯತ್ತ ಕಣ್ಣೆತ್ತಿ ನೋಡುವ ತಾಳ್ಮೆಯೂ ಇಲ್ಲದಿರುವುದು. ಈ ನಿಟ್ಟಿನಲ್ಲಿ ತಡವಾಗಿದ್ದರೂ ಈಗಲಾದರೂ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಬಾಬಾಸಾಹೇಬರು ಹಾಕಿದ್ದ ನೀಲನಕ್ಷೆಯತ್ತ ಅವರ ಅನುಯಾಯಿಗಳು ನೋಡಲಿ. ಬೌದ್ಧ ಧರ್ಮದ ಪುನರುತ್ಥಾನಕ್ಕೆ, ಪುನರುಜ್ಜೀವನಕ್ಕೆ ಪಣ ತೊಡಲಿ.
-ರಘೋತ್ತಮ ಹೊ.ಬ
#Ambedkar #Buddhism #dalit #ಬೌದ್ಧಧರ್ಮ #ಅಂಬೇಡ್ಕರ್
Comments
Post a Comment