ಬೌದ್ಧ ಧರ್ಮ ಸ್ವೀಕಾರದ ತಯಾರಿಯ ಹಿನ್ನೆಲೆಯಲ್ಲಿ 1956 ಮೇ 24 ರಂದು ಬಾಬಾಸಾಹೇಬರು ಬಾಂಬೆಯ ನಾರೆ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಏರ್ಪಡಿಸುತ್ತಾರೆ. ಸುಮಾರು 75 ಸಾವಿರಕ್ಕೂ ಹೆಚ್ಚು ಜನ ಆ ಸಭೆಯಲ್ಲಿ ಭಾಗವಹಿಸಿರುತ್ತಾರೆ. (ಆಧಾರ: Dr.Ambedkar writings and speeches, Vol.17, Part 3, Pp.517). ಸಭೆಯಲ್ಲಿ ಭಾಷಣ ಮಾಡುತ್ತ ಡಾ.ಅಂಬೇಡ್ಕರ್ ರವರು ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಬೌದ್ಧ ಧರ್ಮದಲ್ಲಿರುವ ಅಹಿಂಸೆಯ ಕುರಿತು ಸರಣಿ ಲೇಖನಗಳನ್ನು ಬರೆದಿದ್ದ ವೀರ್ ಸಾವರ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆಕ್ರೋಶದಿಂದ ಗುಡುಗುವ ಡಾ.ಅಂಬೇಡ್ಕರ್ ರವರು "ಸಾವರ್ಕರ್ ಸ್ಪಷ್ಟವಾಗಿ ಏನು ಹೇಳಲು ಬಯಸಿದ್ದಾರೋ ಎಂದು ತಿಳಿದರೆ ನಾನು ಅವರಿಗೆ ಉತ್ತರಿಸುವೆ. ಅವರ ಬರಹಗಳನ್ನು ನೋಡಿದರೆ ಬೌದ್ಧ ಧರ್ಮ ಮತ್ತು ಹಿಂದೂ ಧರ್ಮಗಳ ನಡುವೆ ಮತ್ತೆ ಭೀಕರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದೆನಿಸುತ್ತದೆ. ಅಂದಹಾಗೆ ಯಾರು ನಮ್ಮನ್ನು ಮೇಲೆತ್ತುತ್ತಾರೋ ಅವರಿಗೆ ಮಾತ್ರ ನಮ್ಮನ್ನು ಟೀಕಿಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ಜನರು ಹಳ್ಳಕ್ಕೆ ಬೇಕಾದರೂ ಹೋಗಿ ಬೀಳುತ್ತೇವೆ ಅಂತಹ ಸ್ವಾತಂತ್ರ್ಯ ನಮಗಿದೆ. ಆದ್ದರಿಂದ ನಮ್ಮ ಟೀಕಾಕಾರರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಲಿ" ಎನ್ನುತ್ತಾರೆ.
ಮುಂದುವರಿದು ಬಹಳ ಮುಕ್ತವಾಗಿ ಮಾತನಾಡುತ್ತ ಅವರು "ನನ್ನ ಜನಗಳು ಕುರಿಗಳು. ನಾನು ಅವರನ್ನು ಕಾಯುವ ಕುರುಬ. ನನಗಿಂತ ಶ್ರೇಷ್ಠ ಧಾರ್ಮಿಕ ಮಾರ್ಗದರ್ಶಕ ಅವರಿಗೆ ಸಿಗುವುದು ಸಾಧ್ಯವೇ ಇಲ್ಲ. ಅವರು ನನ್ನನ್ನು ಅನುಸರಿಸುತ್ತಾರೆ, ಅಂತಿಮವಾಗಿ ಜ್ಞಾನವನ್ನು ಗಳಿಸಿಯೇ ಗಳಿಸುತ್ತಾರೆ" ಎನ್ನುತ್ತಾರೆ.
***
Comments
Post a Comment