ಡಾ.ಅಂಬೇಡ್ಕರರು ಯಾಕೆ ಭಿಕ್ಕುಗಳಿಗಿಂತ ವಿವಾಹಿತ ಸಾಮಾನ್ಯ ಉಪಾಸಕರೇ ಬೌದ್ಧ ಧರ್ಮ ಬೆಳೆಸಬೇಕು ಎಂದು ಕರೆಕೊಟ್ಟರೆಂದರೆ...
ಬ್ರಾಹ್ಮಣ ಧರ್ಮ ಮತ್ತು ಬೌದ್ಧ ಧರ್ಮ ಎರಡನ್ನು ಹೋಲಿಸುವ ಬಾಬಾಸಾಹೇಬ್ ಅಂಬೇಡ್ಕರರು ಬ್ರಾಹ್ಮಣ
ಧರ್ಮ ಉಳಿದು ಬೌದ್ಧ ಧರ್ಮ ಏಕೆ ನಾಶವಾಯಿತು ಎಂಬುದಕ್ಕೆ ತಮ್ಮ "ಕ್ರಾಂತಿ ಮತ್ತು
ಪ್ರತಿಕ್ರಾಂತಿ" ಕೃತಿಯಲ್ಲಿ ವಿವರಣೆ ಕೊಡುತ್ತಾ ಅವರು ಹೇಳುವುದು, ಯಾವುದೇ ಧರ್ಮ ಉಳಿಯಬೇಕಾದರೆ
ಮುಖ್ಯ ಕಾರಣ priesthood ಅಥವಾ ಪುರೋಹಿತ ವರ್ಗ. ಈ ನಿಟ್ಟಿನಲ್ಲಿ ಬ್ರಾಹ್ಮಣ ಧರ್ಮದಲ್ಲಿ ಧರ್ಮ
ಉಳಿಸುವ ಪುರೋಹಿತ ವೃತ್ತಿಯನ್ನು ಮದುವೆ ಆಗಿರುವ ಸಾಮಾನ್ಯ ವ್ಯಕ್ತಿಗಳೇ ಮಾಡುತ್ತಿದ್ದರು.
ಅಕಸ್ಮಾತ್ ಆ ವ್ಯಕ್ತಿ ನಿಧನರಾದರೆ ಬಾಲ್ಯದಲ್ಲಿಯೇ ಉಪನಯನ ಪಡೆದಿರುವ ಆತನ ಮಗ ಆ ವೃತ್ತಿ
ಮುಂದುವರಿಸುತ್ತಿದ್ದ. ಆ ಮೂಲಕ ಪುರೋಹಿತ ವರ್ಗ ಉಳಿಯುತ್ತಿತ್ತು, ಆ ಮೂಲಕ ಧರ್ಮದ ಬೆಳವಣಿಗೆ
ಮುಂದುವರೆದಿರುತ್ತಿತ್ತು. ಆದರೆ ಬೌದ್ಧ ಧರ್ಮದಲ್ಲಿ ಭಿಕ್ಕು ಮದುವೆಯಾಗದಂತಿರದ ಕಾರಣ ಅವರ
ನಿಧನದ ನಂತರ ಧರ್ಮ ಪ್ರಸಾರಕ್ಕೆ ಯಾರೂ ಬರುತ್ತಿರಲಿಲ್ಲ. ಅಲ್ಲೊಂದು chain break
ಆಗುತ್ತಿತ್ತು. ಆ ಕಾರಣ ಬೌದ್ಧ ಧರ್ಮದಲ್ಲಿ ಪುರೋಹಿತ ವರ್ಗವಾದ ಭಿಕ್ಕುಗಳ ಸಂಖ್ಯೆ
ತಲೆಮಾರಿನಿಂದ ತಲೆಮಾರಿಗೆ ಕಡಿಮೆಯಾಗುತ್ತ ಬಂದಿತು.
ಯಾವ ಮಟ್ಟಿಗೆಂದರೆ ಭಿಕ್ಕುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತ ಹೊಸ ಭಿಕ್ಕುಗಳು ಉದಯಿಸದೆ
ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರ ಕ್ಷೀಣಗೊಂಡಿತು.
ಹೀಗೆ ಹೇಳುತ್ತ ಇದಕ್ಕೆ ಪರಿಹಾರ ಸೂಚಿಸುವ ಅಂಬೇಡ್ಕರರು, ಪರಿಹಾರವಾಗಿ ಬೌದ್ಧ
ಧರ್ಮವನ್ನು ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಧರ್ಮದ ಮಾದರಿಯಲ್ಲಿ ವಿವಾಹಿತ ಕ್ರೈಸ್ತರೇ ಆ
ಪಂಥದಲ್ಲಿ ಬೈಬಲ್ ಬೋಧಿಸುವಂತೆ ಬೌದ್ಧ ಧರ್ಮದಲ್ಲಿಯೂ ಬದಲಾವಣೆ ತರಬೇಕು. ಆ ನಿಟ್ಟಿನಲ್ಲಿ
ವಿವಾಹಿತ ಉಪಾಸಕರೇ ಹೆಚ್ಚು ಹೆಚ್ಚು ಧರ್ಮ ಬೋಧಿಸುವ ಕೆಲಸವನ್ನು ಮಾಡಬೇಕು ಎಂದು ಹೇಳುತ್ತಾರೆ.
ಪ್ರಶ್ನೆ ಎಂದರೆ ಬಾಬಾಸಾಹೇಬ್ ಅಂಬೇಡ್ಕರರು ಹೇಳಿರುವಂತೆ ವಿವಾಹಿತ ಉಪಾಸಕರೆ ಧರ್ಮ ಬೋಧಿಸುವ
ಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಧಮ್ಮ ಬೋಧಕರ ಕೊರತೆಯಾದರೂ ಹೇಗಾಗುತ್ತದೆ? ಭಿಕ್ಕುಗಳು
ಇಲ್ಲಾ ಅಂದರೆ ಅವರ ಜಾಗದಲ್ಲಿ ವಿವಾಹಿತ ಉಪಾಸಕರು ಆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ
chain break ಆಗುವುದೇ ಇಲ್ಲ. ಭಿಕ್ಕುಗಳು ಮಾಡುತ್ತಿದ್ದ ದೀಕ್ಷೆ ಕೊಡುವುದು, ಧಮ್ಮ ಬೋಧನೆ
ಮಾಡುವುದು... ಹೀಗೆ ವಿವಾಹಿತ ಉಪಾಸಕರೇ ಅದನ್ನು ಪ್ರಾಟೆಸ್ಟೆಂಟ್ ಕ್ರೈಸ್ತ ಮಾದರಿಯಲ್ಲಿ
ಮಾಡುತ್ತ ಹೋದರೆ ಧಮ್ಮ ಸಹಜವಾಗಿ ಉಳಿಯುತ್ತದೆ, ಬೆಳೆಯುತ್ತದೆ. ಬಾಬಾಸಾಹೇಬ್ ಅಂಬೇಡ್ಕರರು ಹೀಗೆ
ಧಮ್ಮ ಪ್ರಸಾರ ಕಾರ್ಯದಲ್ಲಿ ಬದಲಾವಣೆ ಸೂಚಿಸಿ ಪರಿಹಾರ ಕಂಡುಹಿಡಿದಿದ್ದಾರೆ.
ಅಂದಹಾಗೆ ಅಂಬೇಡ್ಕರರು ಹೇಳಿರುವಂತೆ ವಿವಾಹಿತ ಉಪಾಸಕರು ಧಮ್ಮ ಬೋಧಿಸುವ ಕಾರ್ಯದಲ್ಲಿ
ತೊಡಗಿಸಿಕೊಂಡರೆ ಖಂಡಿತ ಅಲ್ಲಿ ಬೌದ್ಧ ಧರ್ಮದ ಬೆಳವಣಿಗೆಗೆ ಯಾವುದೇ ಅಡೆತಡೆ, chain breakup
ನಂತಹ ಸಂದರ್ಭ ಸೃಷ್ಟಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ವಿವಾಹಿತ ಬೌದ್ಧ ಉಪಾಸಕರು ಧಮ್ಮ
ಬೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು, ಆ ಮೂಲಕ ಬೌದ್ಧ ಧರ್ಮದ ಬೆಳವಣಿಗೆಗೆ
ಬಾಬಾಸಾಹೇಬ್ ಅಂಬೇಡ್ಕರರ ಐಡಿಯಾದ ಅಡಿಯಲ್ಲಿ ಕೊಡುಗೆ ನೀಡುವ ನಿಟ್ಟಿನಲ್ಲಿ ಮುಂದಡಿ ಇಡಬೇಕು.
ಆಗ ಬೌದ್ಧ ಧರ್ಮ ಪ್ರಸಾರ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ, ಬೌದ್ಧರ ಸಂಖ್ಯೆ ದುಪ್ಪಟ್ಟು,
ಮೂರು ಪಟ್ಟು ಬಹುಬೇಗ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೌದ್ಧ ಅನುಯಾಯಿ, ಬೌದ್ಧ
ಉಪಾಸಕ ಬಾಬಾಸಾಹೇಬ್ ಅಂಬೇಡ್ಕರರ ಈ ಪರಿಕಲ್ಪನೆಗೆ ಹೆಚ್ಚು ಒತ್ತುಕೊಡಬೇಕು, ಧಮ್ಮ ಬೋಧಿಸುವ
ನಿಟ್ಟಿನಲ್ಲಿ ಸ್ವಯಂ ತೊಡಗಿಸಿಕೊಳ್ಳಬೇಕು.
-ರಘೋತ್ತಮ ಹೊ.ಬ
Comments
Post a Comment