ಮೊನ್ನೆ ಒಬ್ಬರು ಏನೋ ಮಾತಾಡ್ತ "ಸಾರ್, ನೀವು ಯಾವ್ ಜಾತಿ" ಅಂದ್ರು. ನಾನು ಎಸ್ಸಿ ಕಣ್ರಿ ಅಂದೆ. "ಸಾರ್, ನೀವು ಎಸ್ಸಿ ಅಂದರೆ ನಂಬೋಕೆ" ಆಗಲ್ಲ ಸಾರ್"! ಅಂದರು. ಪ್ರಶ್ನೆ ಅಂದರೆ ಎಸ್ಸಿಗಳು ಅಂದರೆ ಹೇಗಿರ್ತಾರೆ? ಖಂಡಿತ, ಜಾತಿವಾದಿ ಜನರಲ್ಲಿ ನಾನು ಈ ಪ್ರಶ್ನೆ ಕೇಳುವುದಿಲ್ಲ. ಯಾಕೆಂದರೆ ನಾವು ತಪ್ಪು ಮಾಡುತ್ತಿದ್ದೇವೆ ಎಂದು ಅವರಿಗೆ ಅನಿಸದೆ ಇರುವುದರಿಂದ ನಾವು ಅವರಲ್ಲಿ ಏನೂ ಕೇಳಬಾರದು. ದಮ್ಮಯ್ಯ, ಗುಡ್ಡಯ್ಯ ಖಂಡಿತ ಅದರ ಅಗತ್ಯವಿಲ್ಲ.
ಆದರೆ ಅದೇ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದಾದರೆ, ಎಸ್ಸಿಗಳು ಹೇಗಿರ್ತಾರೆ? ಅವರಿಗೂ ಒಂದು ಮೂಗು, ಎರಡು ಕಣ್ಣು, ಒಂದು ಬಾಯಿ, ಮೂವತ್ತೆರಡು ಹಲ್ಲುಗಳು, ಎರಡು ಕಿವಿ... ಏನಾದರೂ extra? ಇಲ್ಲ. ಎಲ್ಲರಿಗೂ ಏನು ಇದೆಯೋ ಅದು ಇವರಿಗೂ ಇದೆ. ಆದರೆ ಅವರಲ್ಲಿ ಇಲ್ಲದ ಇವರಲ್ಲಿ ಇರುವ ಒಂದು ವಿಚಾರ ಇವರಲ್ಲಿ "ಅವರು ಇವರು, ಇವರನ್ನು ಆಚೆ ನಿಲ್ಲಿಸಬೇಕು ಇವರನ್ನು ಒಳಕೆ ಬಿಡಬೇಕು" ಎಂಬ ಭೇದದ ಮನಸ್ಸು ಇಲ್ಲ. ಅವರಲ್ಲಿ ಇದೆ. ಅವರಲ್ಲಿ ಇರುವ ಆ ಮನಸ್ಥಿತಿಗೆ ಯಾರು ಕಾರಣ? ಅವರೇ.
ಅಂದಹಾಗೆ ಎಸ್ಸಿಗಳು ಶುಚಿಯಾಗಿರಲ್ಲ ಅದು ಇದು ಅಂತಾನ? ಖಂಡಿತ ಇಲ್ಲ. ಶುಚಿತ್ವಕ್ಕು ಅವರು ಇವರು ಅನ್ನೋದಕ್ಕು ಸಂಬಂಧವೇ ಇರೊಲ್ಲ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅವರದೆ ಜನ ಗಲೀಜಾಗಿದ್ದರು ಅವರು ಅವರ ಜೊತೆಯೇ ಸೇರುತ್ತಾರೆ, ಇವರ ಜೊತೆ ಸೇರುವುದಿಲ್ಲ. ಕಾರಣ? ಮತ್ತದೆ ಮನಸ್ಸಿನ ಸ್ಥಿತಿ State of mind. ಹಿತ್ತಾಳೆ ಪಾತ್ರೆ ಹುಣಸೆಹಣ್ಣಲ್ಲಿ ತೊಳೆಯಬಹುದು ಆದರೆ ಮನಸ್ಸಿನ ಆ ಸ್ಥಿತಿಯನ್ನು, ಭೇದಭಾವದ ವರ್ತನೆಯನ್ನು ಯಾವ ಹುಣಿಸೆ ಹಣ್ಣಿಂದಲೂ ತೊಳೆಯಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ತೊಳೆಯಲು ಹೋಗಲೇಬಾರದು. ತೊಳೆಯೋಕೆ ಹೋದರೆ ಇವರು ಹುಚ್ಚರಾಗಬೇಕಾಗುತ್ತದೆ. ಯಾಕೆಂದರೆ ಅದು ಹೋಗಲ್ಲ, ಇನ್ನೂ ತೊಳೆಯೋದು ಏನ್ ಬಂತು?
ಒಮ್ಮೊಮ್ಮೆ ಅವರು ನಮ್ಮ ಮನೆಗಳಿಗೆ ಬರುವ ಸಂದರ್ಭ ಬರಬಹುದು. ಪ್ರಶ್ನೆ ಎಂದರೆ ಅಂತಹ ಸಂದರ್ಭದಲ್ಲಿ ನಮ್ಮ ಮನೆ ಪಾವನವಾಗುತ್ತದೆಯೇ? ಇಲ್ಲ. Better ಅವರು ಹೋದ ನಂತರ ನಾವು ಕೂಡ ಯಾವುದಾದರೂ ನೀರಿನಿಂದ ಸಿಂಪಡಿಸಿ ಶುಚಿಗೊಳಿಸಿಕೊಳ್ಳುವುದು ಉತ್ತಮ. ಹಾಗೆಯೇ ಯಾವುದೇ ಕಾರಣಕ್ಕೂ ಅವರ ಮನೆಗಳಿಗೆ ನೀರು ಕೊಡಿ ಅದು ಕೊಡಿ ಇದು ಕೊಡಿ ಎಂದು ಹೋಗಬಾರದು. ಅವರೇ ಕರೆದರೂ ಹೋಗಬಾರದು. "ನೋಡಿ ಸ್ವಾಮಿ, ನಮ್ಮ ಮನೆಗೆ ನೀವು ಬರಲ್ಲ. ನಿಮ್ಮ ಮನೆಗೆ ನಾವು ಬರಲ್ಲ" ಅನ್ನಬೇಕು.
ಜಾತಿ ಮತ್ತು ಅಸ್ಪೃಶ್ಯತೆ ಅದು ಎಸ್ಸಿಗಳ ಸಮಸ್ಯೆಯಲ್ಲ. ಅದನ್ನು ಆಚರಿಸುವವರ ಸಮಸ್ಯೆ. ಪರಿಹಾರ? ಎಸ್ಸಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಷ್ಟ ಪಟ್ಟು, ಬರೇ ಕಷ್ಟ ಅಲ್ಲ, ಡಬಲ್ ಕಷ್ಟ ಪಟ್ಟು ಮುಂದಕ್ಕೆ ಬರಬೇಕು. ಡಬಲ್ ಕಷ್ಟ, ಯಾಕೆಂದರೆ ಒಂದು ಸಹಜವಾಗಿ ಸಾಧನೆ ಮಾಡೋಕೆ, ಎರಡನೆಯದು ಅವರು ನೀಡುವ ಅಡೆತಡೆ ಎದುರಿಸೋಕೆ. ಖಂಡಿತ, ಅಂತಹ ಶೈಕ್ಷಣಿಕ ಮತ್ತು ಸ್ವಾಭಿಮಾನದ ಹಣಕಾಸು ಸುಸ್ಥಿತಿ ಗಳಿಸಿದಾಗ ಅವರು ಇವರು, "ನೀವು ಎಸ್ಸಿ ನಾ?" ಎಂದು ಕೇಳುವ ಪ್ರಶ್ಬೆ ಬರುವುದಿಲ್ಲ. ಬಂದರೆ "ಒಂದು ನಿಮಿಷ, ಈಗ ಹೋಗಿ ಒಂದು ಹೊಸ ಸೂಟ್ ಹಾಕಿಕೊಂಡು ಬರುವೆ ಅಥವಾ ಈ ಕಾರು ಬೇಡ, ಬೇರೆ ಕಾರಲ್ಲಿ ಬರ್ಲಾ?" ಅಂದರೆ ಖಂಡಿತ ಅಂತಹವರು ಬಾಯಿ ಮುಚ್ಚಿಕೊಂಡು ಹೋಗುತ್ತಾರೆ. ಅದೇ ನಿಜವಾದ ಸ್ವಾಭಿಮಾನದ ಉತ್ತರವಾಗುತ್ತದೆ.
-ರಘೋತ್ತಮ ಹೊ.ಬ
Comments
Post a Comment