-ರಘೋತ್ತಮ ಹೊ.ಬ
ವ್ಯಕ್ತಿಪೂಜೆ (Hero Worship) ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ರು ತಮ್ಮ "ರಾನಡೆ, ಗಾಂಧಿ ಮತ್ತು ಜಿನ್ನಾ" ಕೃತಿಯಲ್ಲಿ ಹೇಳಿದ್ದಾರೆ. ವ್ಯಕ್ತಿಯೊಬ್ಬನಲ್ಲಿ ಬುದ್ಧಿವಂತಿಕೆ ಇದ್ದರಷ್ಟೆ ಸಾಲದು ಆತ ಪ್ರಾಮಾಣಿಕನಾಗಿಯೂ ಇರಬೇಕು ಎನ್ನುವ ಬಾಬಾಸಾಹೇಬರು ಈ ನಿಟ್ಟಿನಲ್ಲಿ ವ್ಯಕ್ತಿಪೂಜೆ ಭಾರತದಲ್ಲಿ ವ್ಯಾಪಕವಾಗಿ ಇರುವುದನ್ನು ಉಲ್ಲೇಖಿಸುತ್ತಾರೆ. ಅಂಬೇಡ್ಕರರು ಕಂಡುಕೊಂಡಂತೆ ವ್ಯಕ್ತಿಪೂಜೆ ಭಾರತದಲ್ಲಿ ವ್ಯಾಪಕವಾಗಿ ಇರಲು ಮುಖ್ಯ ಕಾರಣ ಇಲ್ಲಿರುವ ವಿಗ್ರಹ ಪೂಜೆಯಾಗಿದೆ. ಇದಕ್ಕೆ ಪೂರಕವಾಗಿ ಬಾಬಾಸಾಹೇಬ ಅಂಬೇಡ್ಕರರು ಹೇಳುವುದು "ವ್ಯಕ್ತಿಪೂಜೆಯು ಭಾರತದ ರಾಜಕೀಯದ ದುರದೃಷ್ಟಕರ ವಾಸ್ತವವಾಗಿದ್ದು, ಅಂತಹ ವ್ಯಕ್ತಿಪೂಜೆಯು ಭಕ್ತನೊಬ್ಬನ ನೈತಿಕ ಕುಸಿತಕ್ಕೆ ಕಾರಣವಾಗುತ್ತದಲ್ಲದೆ ದೇಶಕ್ಕೂ ಅಪಾಯಕಾರಿಯಾಗಿದೆ" ಎನ್ನುತ್ತಾರೆ.(ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ-1 ಪುಟ 230).
ದುರಂತವೆಂದರೆ ಅಂಬೇಡ್ಕರರು ಅಂದು ಎಚ್ಚರಿಕೆ ಕೊಟ್ಟ ವ್ಯಕ್ತಿಪೂಜೆ(Hero Worship) ಶೋಷಿತ ಸಮುದಾಯಗಳ ಪ್ರಸ್ತುತ ದಿನಗಳ ನಮ್ಮ ಸುತ್ತಮುತ್ತಲಿನ ರಾಜಕಾರಣಕ್ಕೂ ಅಮರಿಕೊಂಡಿದೆ. ಯಾವಮಟ್ಟಿಗೆಂದರೆ ವ್ಯಕ್ತಿಯೋರ್ವನನ್ನು ಸತತ ಪೂಜಿಸಿದ ಸಮುದಾಯವೊಂದು ಇಂದು ದಿಕ್ಕೆಟ್ಟು ಕೂತಿದೆ. ವ್ಯಕ್ತಿಯ ತಪ್ಪು ನಿರ್ಧಾರಗಳಿಗಾಗಿ ಆ ಸಮುದಾಯ ಇಂದು ತನ್ನನ್ನು ತಾನು ಶಪಿಸಿಕೊಳ್ಳುತ್ತಿದೆ. ಎಷ್ಟೋ ನೌಕರರು ಡಿಪ್ರೆಶನ್ ಗೆ ಒಳಗಾಗಿದ್ದಾರೆ ಎಂದು ಸ್ನೇಹಿತರೊಬ್ಬರು ತಿಳಿಸಿದರು. ಆ ಮಟ್ಟಿಗೆ ವ್ಯಕ್ತಿಪೂಜೆ ಪ್ರಸ್ತುತ ನಮ್ಮ ಸುತ್ತಲಿನ ನಮ್ಮದೇ ಸಮುದಾಯವನ್ನು ಇಂದು ಅಸಹಾಯಕ ಸ್ಥಿತಿಗೆ ತಳ್ಳಿದೆ. ಇದೇ ಕಾರಣಕ್ಕೆ ಬಾಬಾಸಾಹೇಬ್ ಅಂಬೇಡ್ಕರರು ಅಂದು ವ್ಯಕ್ತಿಪೂಜೆ ಅಪಾಯಕಾರಿ (dangerous) ಎಂದದ್ದು ಮತ್ತು ಅದನ್ನು ಅರಿಯುವಲ್ಲಿ ನಾವು ಎಡವಿದ್ದು.
ಈ ನಿಟ್ಟಿನಲ್ಲಿ ಇನ್ನು ಮುಂದಾದರು ನಾವು ಶೋಷಿತ ಸಮುದಾಯಗಳು ಯಾವುದೇ ವ್ಯಕ್ತಿಪೂಜೆಗೆ, ಆ ರೋಗಕ್ಕೆ ಈಡಾಗುವುದು ಬೇಡ. ಯಾಕೆಂದರೆ ವ್ಯಕ್ತಿಯೋರ್ವ ಶ್ರೇಷ್ಠ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಬಾಬಾಸಾಹೇಬ್ ಅಂಬೇಡ್ಕರರು ಹೇಳುವಂತೆ ಆತನಲ್ಲಿ ಬುದ್ಧಿವಂತಿಕೆ ಜೊತೆಗೆ ಪ್ರಾಮಾಣಿಕತೆಯೂ ಇರಬೇಕು. ದುರಂತ ಇಂದಿನ ಜನರಲ್ಲಿ ಪ್ರಾಮಾಣಿಕತೆ ಇಲ್ಲ. ಹಾಗೆ ಅಂತಹ ವ್ಯಕ್ತಿಗಳು ಜವಾಬ್ದಾರಿಯುತತನವನ್ನು (accountable) ಕೂಡ ಹೊಂದಿರಬೇಕು ಎಂದು ಅಂಬೇಡ್ಕರರ ಹೇಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಅಂತಹ ಸೋಕಾಲ್ಡ್ ವ್ಯಕ್ತಿಪೂಜೆ ಮಾಡಿಸಿಕೊಂಡ ವ್ಯಕ್ತಿಗಳಲ್ಲಿ ಜವಾಬ್ದಾರಿಯುತತನ ಶೂನ್ಯತೆಯ ಮಟ್ಟದ್ದಾಗಿದೆ.
ಆದ್ದರಿಂದ ಈ ದಿನಗಳಲ್ಲಿ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು, ನೌಕರರು ಇನ್ನು ಮುಂದೆ ತಮ್ಮ ಸಮುದಾಯಗಳ ಯಾರನ್ನೂ ವ್ಯಕ್ತಿ ಪೂಜೆ ಮಾಡುವ ಅಗತ್ಯವಿಲ್ಲ, ಮಾಡಿ ಅಂಥವರ ನಡವಳಿಕೆಗಳಿಂದ ನಿರಾಶರಾಗಿ ಖಿನ್ನತೆಗೊಳಗಾಗುವ ಅಗತ್ಯವಿಲ್ಲ. ಹಾಗೇನಾದರೂ ವ್ಯಕ್ತಿಪೂಜೆ ಮಾಡಲೇಬೇಕು ಎಂದರೆ ಕೇವಲ ಬಾಬಾಸಾಹೇಬ್ ಅಂಬೇಡ್ಕರರನ್ನು ಮಾತ್ರ ಪೂಜಿಸೋಣ. ಇತರರತ್ತ ಕಣ್ಣೆತ್ತಿಯೂ ನೋಡದಿರೋಣ ಮತ್ತು ಅಂತಹವರ ಬೇಜವಾಬ್ದಾರಿ ನಡವಳಿಕೆಗಳಿಗೆ ನಿರ್ಲಕ್ಷ್ಯದ ಚಾಟಿ ಬೀಸಿ ಮುಂದೆ ಸಾಗೋಣ.
ಜೈಭೀಮ್.
Good information
ReplyDelete