-ರಘೋತ್ತಮ ಹೊ.ಬ
ಮೊನ್ನೆ ಒಂದು ಅಂಗಡಿಯಲ್ಲಿ 40 ಸಾವಿರ ರೂಗೆ ಒಂದು ಹೊಸ ಟಿವಿ ತೆಗೆದುಕೊಂಡೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಯ ಆ ಮಾಲೀಕರು "ಸರ್, ಇದಕ್ಕೆ ಸ್ಟೆಬಿಲೈಜರ್ ಬೇಕಾಗುತ್ತದೆ" ಎಂದು ಪಕ್ಕದಲ್ಲೇ ಇದ್ದ ಒಂದು ಅಂಗಡಿಯಿಂದ ಸ್ಟೆಬಲೈಜರ್ ತೆಗೆದುಕೊಳ್ಳಲು ಹೇಳಿದರು. 4 ಸಾವಿರ ರೂ ತೆತ್ತು ನಾನು ಆ ಅಂಗಡಿಯಿಂದ ಸ್ಟೆಬಿಲೈಜರ್ ಕೊಂಡುಕೊಂಡೆ. ಹಾಗೆ ಆಟೋದಲ್ಲಿ ಮನೆಗೆ ಟಿವಿ ಕಳಿಸುವುದಾಗಿ ಹೇಳಿದ ಆ ಅಂಗಡಿ ಮಾಲೀಕರು ತಮ್ಮದೇ ಸಮುದಾಯದ ಆಟೋ ಚಾಲಕನಿಗೆ ಆ ಕೆಲಸ ವಹಿಸಿದ್ದರು! ಹಾಗೆ ಟಿವಿ ಸ್ವೀಕರಿಸಿದ ನಾನು ಟಿವಿ ಇನ್ ಸ್ಟಾಲ್ ಮಾಡುವವರಿಗಾಗಿ ಕಾದು ಕುಳಿತಾಗ ಅದೇ ಸಮುದಾಯದ ಇಬ್ಬರು ಮೆಕ್ಯಾನಿಕ್ ಗಳು ಟಿವಿ ಇನ್ ಸ್ಟಾಲ್ ಮಾಡಲು ಬಂದರು. ಅವರಿಗೂ ಕೂಡ ನಾನು ಅಮೌಂಟ್ ಕೊಟ್ಟು ಕಳುಹಿಸಿದೆ. ಹೋಗುವಾಗ ಆ ಮೆಕ್ಯಾನಿಕ್ ಗಳು "ಸರ್, ಕೇಬಲ್ ಟಿವಿಗಿಂತ ಡಿಷ್ ಹಾಕಿಸಿಕೊಳ್ಳಿ ಎಂದು ಡಿಟಿಹೆಚ್ ಕಂಪನಿಯ ನಂಬರ್ ಒಂದನ್ನು ಕೊಟ್ಟರು. ಅಂದಹಾಗೆ ಡಿಟಿಹೆಚ್ ಕಂಪನಿಯ ಆ ಫ್ರ್ಯಾಂಚೈಸಿ ವ್ಯಕ್ತಿ ಕೂಡ ಅದೇ ಸಮುದಾಯದವರಾಗಿದ್ದರು. ಹಾಗೆ ಆನ್ ಲೈನ್ ಪೇಮೆಂಟ್ ನಂತರ ಆ ವ್ಯಕ್ತಿ ಡಿಷ್ ಹಾಕಲು ಇಬ್ಬರು ಹುಡುಗರನ್ನು ಕಳುಹಿಸಿದರು ಅವರು ಕೂಡ ಅದೇ ಸಮುದಾಯದವರಾಗಿದ್ದರು! ಅಂದರೆ ಒಬ್ಬ ಟಿವಿ ಅಂಗಡಿಯ ಮಾಲೀಕ ತನ್ನದೆ ಸಮುದಾಯದ ಒಬ್ಬ ಎಲೆಕ್ಟ್ರಿಕ್ ಅಂಗಡಿಯವ, ಓರ್ವ ಆಟೋ ಚಾಲಕ, ಓರ್ವ ಮೆಕ್ಯಾನಿಕ್, ಓರ್ವ ಡಿಟಿಹೆಚ್ ಫ್ರ್ಯಾಂಚೈಸಿ, ಇಬ್ಬರು ಕಾರ್ಮಿಕ... ಹೀಗೆ ಆರು ಜನರಿಗೆ ಬಿಸಿನೆಸ್ ಮಾಡಿಕೊಟ್ಟಿದ್ದ. 40 ಸಾವಿರ ರೂ ಟಿವಿಗೆ ಇನ್ನೂ ಹತ್ತು ಸಾವಿರ ತನ್ನದೇ ಸಮುದಾಯಕ್ಕೆ ತಲುಪುವಂತೆ ಆತ ನೋಡಿಕೊಂಡಿದ್ದ. ಇದನ್ನೆಲ್ಲ ನೋಡುತ್ತಿದ್ದ ನನಗೆ ಆಶ್ಚರ್ಯ ಜೊತೆಗೆ ಖುಷಿ ಕೂಡ ಆಯಿತು. ಹೇಗೆ ಒಂದು ಸಮುದಾಯ ಒಂದು ನೆಟ್ವರ್ಕ್ ಮೂಲಕ ತನ್ನ ಆರ್ಥಿಕತೆ ಕಟ್ಟಿಕೊಳ್ಳುತ್ತಿದೆ, ಎಲ್ಲಾ ಅಡೆ ತಡೆಗಳ ನಡುವೆಯೂ ಹೇಗೆ ಬದುಕುತ್ತಿದೆ ಎಂಬುದು ಅರಿವಿಗೆ ಬಂತು.
ಖಂಡಿತವಾಗಿ, ಇಂದು ಶೋಷಿತ ವರ್ಗದ ಜನರು ಕೂಡ ಮೇಲ್ಕಾಣಿಸಿದ ಅಂತಹ ಸಮುದಾಯ ಆರ್ಥಿಕ ಜಾಲ ಅಥವಾ ನೆಟ್ವರ್ಕ್ ಬೆಳೆಸಿಕೊಳ್ಳಬೇಕಿದೆ ರೂಢಿಸಿಕೊಳ್ಳಬೇಕಿದೆ. ಎಲ್ಲವನ್ನೂ ಸರ್ಕಾರದತ್ತ ನೋಡುವ ಬದಲು ಒಂದು ಸಂಘಟಿತ ಸಮುದಾಯವಾಗಿ ತಾನು ಹೀಗೆ ಆರ್ಥಿಕತೆ ಬೆಳೆಸಿಕೊಳ್ಳಲು ಸಾಧ್ಯವಾ ಎಂದು ಯೋಚಿಸಬೇಕಿದೆ. ಯಾಕೆಂದರೆ ಶೋಷಿತ ಸಮುದಾಯಗಳ ಶಕ್ತಿ ಅದು ಅದರ ಜನಸಂಖ್ಯೆಯಾಗಿದೆ. ಎಷ್ಟೋ ಜಿಲ್ಲೆಗಳಲ್ಲಿ ಉದಾಹರಣೆಗೆ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ಗುಲ್ಬರ್ಗ, ಬೆಳಗಾವಿ, ಬೀದರ್, ವಿಜಯಪುರ.. ಹೀಗೆ ಜಿಲ್ಲೆಗಳಲ್ಲಿ ಶೋಷಿತ ವರ್ಗದ ಜನರ ಜನಸಂಖ್ಯೆ ಶೇ.30 ರ ಆಸುಪಾಸಿನಲ್ಲಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಅರೆಕ್ಷಣ ಯೋಚಿಸಿ ಈಗಾಗಲೇ ತಾನು ಯಾರ ಬಳಿ ವ್ಯಾಪಾರ ವ್ಯವಹಾರ ಮಾಡುತ್ತಿದೆಯೋ ಅಂತಹವರ ಜೊತೆಗೆ ವ್ಯಾಪಾರ ವ್ಯವಹಾರ ನಿಲ್ಲಿಸಿ ಶೋಷಿತ ಸಮುದಾಯ ತನ್ನವರತ್ತ ಕಣ್ತೆರೆದರೆ ಅಥವಾ ತನ್ನವರ ಬಳಿ ಅಂತಹ ವ್ಯಾಪಾರ ವ್ಯವಹಾರಸ್ಥರು ಇಲ್ಲದಾಗ ತಾವುಗಳೇ ಯಾಕೆ ಆ ನಿಟ್ಟಿನಲ್ಲಿ ಯೋಚಿಸಬಾರದು ಎಂದು ವ್ಯಾಪಾರ ವ್ಯವಹಾರಕ್ಕೆ ಇಳಿದರೆ, ಒಂದು ನೆಟ್ವರ್ಕ್ ರೂಪಿಸಿದರೆ, ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಇಳಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ.
ಇಂತಹ ಪ್ರಯತ್ನಗಳಿಗೆ ಕೆಲವರಿಂದ ನೆಗೆಟಿವ್ ವಿಚಾರಗಳು ಬರಬಹುದು. ಈ ದಿಸೆಯಲ್ಲಿ ಅಂತಹ ನೆಗೆಟಿವ್ ಸಲಹೆಗಳನ್ನು ಬದಿಗೊತ್ತಿ ಪಾಸಿಟಿವ್ ಆಗಿ ಮುಂದುವರಿದರೆ ಖಂಡಿತ ಶೋಷಿತ ಸಮುದಾಯಗಳು ಮೇಲ್ಕಾಣಿಸಿದ ಸಮುದಾಯದ ರೀತಿ ಆರ್ಥಿಕವಾಗಿ ಬಲಾಢ್ಯರಾಗಬಹುದು. ಅಂದಹಾಗೆ ಒಮ್ಮೆ ಹೀಗೆ ಆರ್ಥಿಕವಾಗಿ ಶೋಷಿತ ಸಮುದಾಯಗಳು ಬಲಾಢ್ಯರಾದರೆ ಅಸ್ಪೃಶ್ಯತೆ ತಕ್ಕಮಟ್ಟಿಗೆ ದೂರ ಸರಿಯಲಿದೆ. ಸಮುದಾಯದ ಸ್ವಾಭಿಮಾನ ಕೂಡ ಎತ್ತಿಹಿಡಿಯಲ್ಪಡಲಿದೆ.
***
#ದಲಿತ_ಉದ್ಯಮಶೀಲತೆ
Comments
Post a Comment