ಬಾಬಾಸಾಹೇಬ್ ಅಂಬೇಡ್ಕರ್ ರ ಸುಪ್ರಸಿದ್ಧ ಇಂಗ್ಲಿಷ್ ಕೃತಿ "ರಿಡಲ್ಸ್ ಇನ್ ಹಿಂದೂಯಿಸಂ (ಹಿಂದೂ ಧರ್ಮದಲ್ಲಿನ ಒಗಟುಗಳು)" ಬಹಳ ಮಹತ್ವದ ಕೃತಿಯಾಗಿದೆ. ತಮ್ಮ ಈ ಕೃತಿಯಲ್ಲಿ ಡಾ.ಅಂಬೇಡ್ಕರ್ ರು ಅದೆಷ್ಟು ಬೋಲ್ಡ್ ಆಗಿ ಧರ್ಮದ ಎಲ್ಲಾ ಗೋಜಲುಗಳನ್ನು ಗೊಂದಲಗಳನ್ನು ಒಗಟುಗಳ(Riddles) ರೂಪದಲ್ಲಿ ಪಟ್ಟಿ ಮಾಡಿದ್ದಾರೆಂದರೆ... ಅವರ ಆ ಇಂಗ್ಲಿಷ್ ಪ್ರೌಢಿಮೆ.. ವೇದ, ಉಪನಿಷತ್, ಪುರಾಣಗಳು, ವಿವಿಧ ಶಾಸ್ತ್ರಗಳು, ವಿವಿಧ ಸ್ಮೃತಿ ಗಳು ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಅವರು ಬರೆದಿರುವ ಶೈಲಿ totally beautiful. ಯಾಕೆಂದರೆ ಡಾ.ಅಂಬೇಡ್ಕರರು ತಮ್ಮ ಆ ಶ್ರೇಷ್ಠ ಇಂಗ್ಲಿಷ್ ನಲ್ಲಿ ಸಂಸ್ಕೃತ ಮೂಲದ ವೇದ, ಉಪನಿಷತ್, ಪುರಾಣ, ಸ್ಮೃತಿಗಳ ವಿಚಾರ ಇವುಗಳನ್ನೆಲ್ಲ ಮಂಡಿಸಿರುವ ರೀತಿ ಅಕ್ಷರಶಃ ಬೆರಗು ಮೂಡಿಸುತ್ತದೆ. ಆ ಮೂಲಕ ಇಡೀ ವಿಷಯವನ್ನು, ಸಮಸ್ಯೆಯನ್ನು ಬಾಬಾಸಾಹೇಬರು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಅಮೆರಿಕಾ ಮತ್ತು ಲಂಡನ್ ಎರಡೂ ವಾತಾವರಣಗಳ ಇಂಗ್ಲಿಷ್ ಅನ್ನು ಡಾ.ಅಂಬೇಡ್ಕರ್ ರವರು ಬಳಸಿರುವುದರಿಂದ ಅವುಗಳನ್ನು ಓದಲು ಅರ್ಥೈಸಿಕೊಳ್ಳಲು ಪಕ್ಕದಲ್ಲಿ ಡಿಕ್ಷನರಿ ಇಟ್ಟುಕೊಳ್ಳಬೇಕು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟೊಂದು ಕಠಿಣ ಮತ್ತು ಅಚ್ಚುಕಟ್ಟಾದ ಮಂಡನೆಯೇ ಆ ಕೃತಿಯ ವಿಶೇಷ.
ಡಾ.ಅಂಬೇಡ್ಕರ್ ರ ಆ "ರಿಡಲ್ಸ್ ಇನ್ ಹಿಂದೂಯಿಸಂ" ಕೃತಿಯಲ್ಲಿ ಸುಮಾರು 27 ರಿಡಲ್ಸ್ ಅಥವಾ ಒಗಟುಗಳಿವೆ. ಘನವೆತ್ತ ಭಾರತ ಸರ್ಕಾರವೇ ಪ್ರಕಟಿಸಿರುವ ಆ ಕೃತಿಯನ್ನು ಪ್ರತಿಯೊಬ್ಬರೂ ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳಲಿಕ್ಕಾಗಿಯಾದರೂ ಓದಲೇಬೇಕು. ಯಾಕೆಂದರೆ ಮೊದಲ ಒಗಟಿನಲ್ಲಿಯೇ ಡಾ.ಅಂಬೇಡ್ಕರ್ ರು ಹೇಳುವ ವಿಚಾರ "ಒಬ್ಬ ವ್ಯಕ್ತಿ ಹಿಂದೂ ಏಕಾಗುತ್ತಾನೆ ಎಂಬುದನ್ನು ಅರಿಯುವುದರಲ್ಲಿ ಇರುವ ಸಂಕಷ್ಟ" ಎಂಬುದು. ಎರಡನೆಯ ಒಗಟಿನಲ್ಲಿ ವೇದಗಳ ಮೂಲ, ನಂತರದ ಒಗಟುಗಳಲ್ಲಿ ಶಾಸ್ತ್ರಗಳ, ಉಪನಿಷತ್ತುಗಳ, ದೇವರುಗಳ, ದೇವತೆಗಳ, ವಿವಿಧ ಸ್ಮೃತಿಗಳ, ಅಹಿಂಸೆ, ಹಿಂಸೆ... ಹೀಗೆ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದನ್ನೂ ಡಾ.ಅಂಬೇಡ್ಕರರು ಒಗಟುಗಳ ರೂಪದಲ್ಲಿ ಓದುಗನ ಮುಂದಿಟ್ಟಿದ್ದಾರೆ.
ನಂತರದ ಅಧ್ಯಾಯಗಳಲ್ಲಿ ತ್ರಿಮೂರ್ತಿಗಳು, ಸ್ಮಾರ್ತ ಧರ್ಮ, ತಾಂತ್ರಿಕ್ ಧರ್ಮ, ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಕಲಿವರ್ಜ್ಯ ಎಂದರೇನು, ಕಲಿಯುಗ ಎಂದರೇನು, ಪಿತೃತ್ವ ಸಮಾಜ ಮಾತೃತ್ವ ಸಮಾಜ ಹೇಗಾಯಿತು... ಹೀಗೆ ಡಾ.ಅಂಬೇಡ್ಕರ್ ರು ವಿಚಾರಗಳನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ. ಹೀಗೆ ದಾಖಲಿಸುವ ಸಂದರ್ಭಗಳಲ್ಲಿ ಅವರು
ನೀಡುವ ರೆಫರೆನ್ಸ್ ಅಥವಾ ಆಕರ ಗ್ರಂಥಗಳು, ಅದರ ಅಂಶಗಳು ಅಕ್ಷರಶಃ ಬಾಬಾಸಾಹೇಬರ ಅತ್ಯಂತ ಶ್ರೇಷ್ಠ ಓದಿನ ಜಗತ್ತನ್ನು, ಉತ್ಕೃಷ್ಟ ಸಂಶೋಧನಾ ಮಾರ್ಗವನ್ನು, ವಕೀಲಿ ಶೈಲಿಯ ವಿಚಾರ ಮಂಡನೆಯನ್ನು ಮಾರ್ಗದುದ್ದಕ್ಕು ಓದುಗರಿಗೆ ಉಣಬಡಿಸುತ್ತದೆ.
ಕೊನೆಯಲ್ಲಿ ಅವರ ಆ ಕೃತಿ "ಕಲಿಯುಗ" ಅಂದರೆ ಈಗಿನ ಯುಗಕ್ಕೆ ಬಂದು ಅದಕ್ಕೆ ಸಂವಾದಿಯಾಗಿ ಮನ್ವಂತರ, ಹಾಗೆ "ರಾಮ ಮತ್ತು ಕೃಷ್ಣರ ಒಗಟು"ಗಳನ್ನು ದಾಖಲಿಸುತ್ತ ನಿಲ್ಲುತ್ತದೆ. ವಾಸ್ತವವೆಂದರೆ ತಮ್ಮ ಆ ಕೃತಿಯಲ್ಲಿ ಡಾ.ಅಂಬೇಡ್ಕರರು ಯಾವುದೇ ಧರ್ಮವನ್ನಾಗಲೀ ಮತ್ತೊಂದನ್ನಾಗಲಿ ನಿಂದಿಸಲು ಹೋಗಿಲ್ಲ. ಬದಲಿಗೆ ವಿದ್ವಾಂಸರ ಮುಂದೆ ಹತ್ತಾರು ಪ್ರಶ್ನೆಗಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ರೂಪದಲ್ಲಿ ಇಟ್ಟಿದ್ದಾರೆ. ಖಂಡಿತ, ಈ ವಿಷಯದಲ್ಲಿ ಆಸಕ್ತರು ಅಥವಾ ಈ ವಿಷಯವನ್ನು ಕಲಿಯುತ್ತಿರುವ ಧರ್ಮಶಾಸ್ತ್ರದ ಸಂಶೋಧನಾರ್ಥಿಗಳು ಬಾಬಾಸಾಹೇಬ್ ಅಂಬೇಡ್ಕರರ ಆ ಒಂದೊಂದು ಒಗಟನ್ನು ಒಂದೊಂದು ಸಂಶೋಧನಾ ಸವಾಲಾಗಿ ಸ್ವೀಕರಿಸಿ ಸೂಕ್ತ ಉತ್ತರ ನೀಡಬಹುದು. ಈ ನಿಟ್ಟಿನಲ್ಲಿ ಅದು ವಿದ್ಯಾರ್ಥಿಗಳನ್ನು ಅಕ್ಷರಶಃ ಪ್ರೇರೇಪಿಸುತ್ತದೆ. ಹಾಗೆ ಸಂಶೋಧನಾರ್ಥಿಗಳಿಗೆ ಎಲ್ಲಿಯೂ ಕೇಳದ ಈ ಒಗಟುಗಳಿಗೆ ಸೂಕ್ತ ಉತ್ತರ ನೀಡಲು ಈ ಕೃತಿ ಮಾರ್ಗ ತೋರುತ್ತದೆ, ಸತ್ಯ ಶೋಧನೆಗೆ ಕೈ ಹಿಡಿದು ಮುನ್ನಡೆಸುತ್ತದೆ.
ದುರಂತದ ವಿಚಾರವೆಂದರೆ ಬಾಬಾಸಾಹೇಬ್ ಅಂಬೇಡ್ಕರರ ಈ ಕೃತಿಯನ್ನು ಈ ಸಂಬಂಧ ಉತ್ತರಿಸಬೇಕಾದ ಯಾರೂ ಕೂಡ ಸೂಕ್ತವಾಗಿ ಓದಿ, ಅಧ್ಯಯನ ಮಾಡಿ
ಒಗಟುಗಳಿಗೆ ಉತ್ತರಿಸಲು ಹೋಗಿರುವುದು ಎಲ್ಲಿಯೂ ದಾಖಲಾಗಿಲ್ಲ ಅಥವಾ ಈ ಸಂಬಂಧದ ಪ್ರತಿಸಂಶೋಧನಾ ಸಾಕ್ಷಿಗಳು ಕೂಡ ನಮ್ಮ ಮುಂದೆ ಎಲ್ಲಿಯೂ ದೊರಕಿಲ್ಲ. ಪೂರ್ವಾಗ್ರಹ ಪೀಡಿತ ಮನಸ್ಸು ಹೊಂದಿ ಅವುಗಳನ್ನು ಓದುವುದಿರಲಿ ಕಣ್ಣೆತ್ತಿ ನೋಡದವರೆ ಬಹುಸಂಖ್ಯಾತರಾಗಿದ್ದಾರೆ! ಒಟ್ಟಾರೆ ಹೇಳುವುದಾದರೆ, ಬಾಬಾಸಾಹೇಬ್ ಅಂಬೇಡ್ಕರರು ಎತ್ತಿರುವ ಆ ಒಗಟುಗಳು ಈಗಲೂ ಒಗಟಿನ ರೂಪದಲ್ಲಿಯೇ ಇವೆ. ಈ ನಿಟ್ಟಿನಲ್ಲಿ "ರಿಡಲ್ಸ್ ಇನ್ ಹಿಂದೂಯಿಸಂ" ಡಾ.ಅಂಬೇಡ್ಕರರ ಈ ಕೃತಿ ಉತ್ತರ ಕಾಣದ ಒಗಟುಗಳ ಗುಚ್ಛವಾಗಿ ಈಗಲೂ ಹಾಗೆಯೇ ಉಳಿದಿದೆ.
***
Comments
Post a Comment