ಒಂದು ಮಾಹಿತಿಯ ಪ್ರಕಾರ "ಕೊರೊನ ಕಾರಣಕ್ಕೆ ಯಾರು ಸಾಯುತ್ತಿಲ್ಲ, ಆಕ್ಸಿಜನ್ ಕೊರತೆಯ ಕಾರಣಕ್ಕೆ ಜನ ಸಾಯುತ್ತಿದ್ದಾರೆ" ಎಂಬುದು. ಹ್ಞಾಂ, ಇದೇ ಸಮೀಕರಣ ಅಸ್ಪೃಶ್ಯತೆಗೂ ಅಪ್ಲೈ ಆಗುತ್ತದೆ. "ಅಸ್ಪೃಶ್ಯತೆ ಕಾರಣಕ್ಕೆ ಯಾರೂ ಸಾಯುತ್ತಿಲ್ಲ, ಬದಲಿಗೆ ಅವರ ಮೇಲೆ ಹೇರಿರುವ ಹಣಕಾಸು ಕಟ್ಟುಪಾಡಿನ ಕಾರಣಕ್ಕೆ ಅವರು ಸಾಯುತ್ತಿದ್ದಾರೆ"!
ಹೌದು, ಅಸ್ಪೃಶ್ಯತೆ ಅದು ಅಸ್ಪೃಶ್ಯ ಸಮುದಾಯಗಳ ಸಮಸ್ಯೆಯಲ್ಲ. ಅದು ಅದನ್ನು ಆಚರಿಸುವವರ ಸಮಸ್ಯೆ. ಆದರೆ ನೋವು ಮತ್ತು ನಷ್ಟ ಅನುಭವಿಸುತ್ತಿರುವವರು ಮಾತ್ರ ಅಸ್ಪೃಶ್ಯ ವರ್ಗದವರು ಎಂದು ಆ ಕಾಲದಲ್ಲೇ ಡಾ.ಅಂಬೇಡ್ಕರ್ ರವರು ಹೇಳಿದ್ದಾರೆ. ಹಾಗೆಯೇ "ಅಸ್ಪೃಶ್ಯತೆ ಆಚರಿಸುತ್ತಿರುವವರು ಯಾವುದೇ ಕಾರಣಕ್ಕು ಆಚರಣೆ ನಿಲ್ಲಿಸುವುದಿಲ್ಲ. ಯಾಕೆಂದರೆ ಅದು ಒಂದು ಕೊಳ್ಳೆ ಹೊಡೆಯುವ ಮತ್ತು ಆ ಕೊಳ್ಳೆಯಲ್ಲಿ ಪರಸ್ಪರ ಹಂಚಿಕೊಳ್ಳುವ, ಪಾಲು ಮಾಡಿಕೊಳ್ಳುವ ಪದ್ಧತಿಯಾಗಿದೆ" ಎಂದು ಕೂಡ ಅಂಬೇಡ್ಕರರು ಹೇಳಿದ್ದಾರೆ. ಆದ್ದರಿಂದ ಅಸ್ಪೃಶ್ಯತೆಯನ್ನು ಯಾರೋ ನಿರ್ಮೂಲನೆ ಮಾಡ್ತಾರೆ ಅಥವಾ ಸರ್ಕಾರ ನಿರ್ಮೂಲನೆ ಮಾಡುತ್ತೆ ಎಂದು ಜನ ಕಾಯುವುದು ತಪ್ಪು. ಬದಲಿಗೆ ತಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳಿಂದ, ಹಾಕಿರುವ ಕಣ್ಣಿಗೆ ಕಾಣದ ಬೇಡಿಗಳಿಂದ ಬಿಡಿಸಿಕೊಳ್ಳುವುದ ಕಲಿಯಬೇಕು.
ಅಂತಹ ಬೇಡಿಗಳೆಂದರೆ, ಪ್ರಮುಖವಾಗಿ ವ್ಯಾಪಾರ- ವ್ಯವಹಾರ ಮಾಡಬೇಡ, ಹಣಕಾಸು ಸಂಪಾದನೆ ಮಾಡಬೇಡ, ಜಮೀನು- ಸೈಟು ತೆಗೆದುಕೊಳ್ಳಬೇಡ, ಸ್ವಂತ ಮನೆ ಕಟ್ಟಿಸಿಕೊಳ್ಳಬೇಡ, ಆಸ್ತಿ ಮಾಡಿಕೊಳ್ಳಬೇಡ, ಚಿನ್ನ - ಒಡವೆ ಮಾಡಿಸಿಕೊಳ್ಳಬೇಡ, ಓದಬೇಡ, ಬರೆಯಬೇಡ, ಒಳ್ಳೆಯ ಬಟ್ಟೆ ಹಾಕಿಕೊಳ್ಳಬೇಡ, ಒಳ್ಳೆಯ ಊಟ ಮಾಡಬೇಡ, ಸ್ಟೈಲ್ ಮಾಡಬೇಡ, ಘನತೆಯ ಬದುಕ ಬದುಕಬೇಡ... ಇತ್ಯಾದಿ. ಈ ಪಟ್ಟಿ ನೋಡಿದರೆ ಬಹುತೇಕರಿಗೆ ಮೊದಲ ನೋಟಕ್ಕೆ ಇದು ವಾಸ್ತವನಾ ಎಂದು ಆಶ್ಚರ್ಯವಾಗಬಹುದು. ಆದರೆ ಇದು ವಾಸ್ತವ ಎಂಬುದು ಅವರ ಎರಡನೇ ನೋಟಕ್ಕೆ, ಚಿಂತನೆಗೆ ಅರ್ಥ ಆಗುತ್ತದೆ.
ಈ ದಿಸೆಯಲ್ಲಿ ಒಂದಷ್ಟು ಬೇಡಿ ಅಥವಾ ಕಟ್ಟುಪಾಡುಗಳಿಂದ ಹೊರ ಬರುವ ಕೆಲಸ ನಡೆದಿದೆ ಎಂಬುದು ನಿಜ. ಆದರೆ ನಿಜದ ಬೇಡಿಯಾದ, ಕಟ್ಟುಪಾಡಾದ ಹಣಕಾಸು ಸಂಪಾದನೆಯ ಕಟ್ಟುಪಾಡಿನಿಂದ ಅಸ್ಪೃಶ್ಯ ವರ್ಗದವರು ಹೊರಬಂದಿಲ್ಲ. ಯಾರಿಗಾದರೂ ನಿರುದ್ಯೋಗಿಗೆ "ಒಂದು ಅಂಗಡಿ ಮುಂಗಟ್ಟು, ಹೊಟೆಲ್ ತೆಗೆಯಪ್ಪ" ಎಂದು ಸಲಹೆ ಕೊಟ್ಟರೆ, "ಅಯ್, ನಮ್ ಕೈಲಿ ಆದ್ದ ಸಾ, ನಮ್ಮವರಿಗೆ ಆದ್ದ ಸಾ, ಯಾರ್ ಬಂದರು ಸಾ" ಹೀಗೆ ರಾಗ ಹೊಡೆಯುತ್ತಾರೆ. ಆ ರಾಗ ಅವರ ತಪ್ಪಿನದ್ದಲ್ಲ. ಶತಶತಮಾನಗಳಿಂದ ಹೇರಿರುವ ಕಟ್ಟುಪಾಡಿನ ತಪ್ಪು ಅದು. ಅದು ಅವರಲ್ಲಿ ಹುಟ್ಟುಟ್ಟುತ್ತಲೇ ಅಂತಹ ಒಂದು ಮನಸ್ಥಿತಿ ಬೆಳೆಸಿದೆಯಷ್ಟೆ. ಈ ನಿಟ್ಟಿನಲ್ಲಿ ದಾರಿ ಬೇರೆ ಇಲ್ಲ, ಅದರಿಂದ ಹೊರಬರಬೇಕಿದೆ.
ಹೊರಬರುವುದು ಹೇಗೆ?
ಮೊದಲಿಗೆ ತಮ್ಮ ಸಮುದಾಯವನ್ನೇ ಅವರುಗಳು ಒಂದು ಆರ್ಥಿಕ ಗುಂಪು ಎಂದು ಪರಿಗಣಿಸಬೇಕು. ಎರಡನೆಯದು ತಮ್ಮ ಸಮುದಾಯದಲ್ಲೇ ಎಲ್ಲಾ ಬಗೆಯ ವ್ಯವಹಾರ ಮಾಡುವ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಅಕಸ್ಮಾತ್ ಅಂತಹ ಒಂದು ವ್ಯವಹಾರದ ಕ್ಷೇತ್ರಗಳಲ್ಲಿ ತಮ್ಮವರು ಇಲ್ಲವೆಂದರೆ ಸೃಷ್ಟಿ ಮಾಡುವ ಬೆಳೆಸುವ ಕೆಲಸವನ್ನು ಎಲ್ಲರೂ ಸೇರಿ ಅಥವಾ ಪ್ರಜ್ಞಾವಂತರು ಮಾಡಬೇಕು. ಏನೇ ಕಷ್ಟ ಬಂದರೂ ಎಷ್ಟೇ ದೂರ ಆದರೂ ತಮ್ಮವರ ಅಂಗಡಿಗಳಲ್ಲೇ ನಾವು ಎಲ್ಲಾ ಬಗೆಯ ದಿನ ನಿತ್ಯದ ಅಗತ್ಯದ ವಸ್ತುಗಳನ್ನು ಖರೀದಿಸುತ್ತೇವೆ ಎಂಬ ಬದ್ಧತೆ ಹೊಂದಬೇಕು. ನಿಜ, ಇದು ಕಷ್ಟ. ಆದರೆ ಅಸ್ಪೃಶ್ಯತೆ ನಿವಾರಣೆಗೆ ಸಮುದಾಯ ತನ್ನನ್ನು ತಾನು ಹೀಗೆ ತೊಡಗಿಸಿಕೊಳ್ಳಲಿಲ್ಲವೆಂದರೆ ಬಹುಶಃ ಶತಶತಮಾನಗಳವರೆಗೆ ಇಂತಹ ನಿರ್ಬಂಧಗಳು, ಕಟ್ಟುಪಾಡುಗಳು ಮುಂದುವರಿಯಲಿವೆ. ನಮ್ಮ ಕೈಗಳಿಗೆ ತೊಡಿಸಿರುವ ಬೇಡಿಗಳನ್ನು ನಮ್ಮ ಮಕ್ಕಳುಗಳಿಗೆ ತೊಡಿಸುವ ಕೆಲಸವನ್ನು ನಾವೇ ಮಾಡುತ್ತೇವೆ! ಖಂಡಿತ, ಹಾಗಾಗಬಾರದು. ಬೇಡಿ ಕತ್ತರಿಸುವ ಕೆಲವನ್ನು ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಮಾಡಲೇಬೇಕು.
ಹೀಗೆ ಶೋಷಿತ ವರ್ಗದ ಜನರು ತಮ್ಮ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ತಕ್ಷಣಕ್ಕೆ ಕಷ್ಟ. ಉದಾಹರಣೆಗೆ ಇನ್ನೊಂದು ಜಾತಿಯವನ ಅಂಗಡಿಯಲ್ಲಿ ಅವರು ಸಾಲ ಪಡೆಯುತ್ತಿರುತ್ತಾರೆ. ಅಂಗಡಿಯಾತನೋ ಇವರನ್ನು ಸದಾ ಸಾಲದಲ್ಲಿಯೇ ಇರಿಸಲು ಇಷ್ಟಪಡುತ್ತಾನೆ. ಯಾಕೆಂದರೆ ಅವನಿಗೊಬ್ನ ಪರ್ಮನೆಂಟ್ ಗ್ರಾಹಕ ಬೇಕಲ್ಲ? ಹಾಗೆಯೇ ಸದಾ ನಗುನಗುತ್ತ ಮಾತನಾಡಿಸುತ್ತಾನೆ! Once again ಅದೇ ಗ್ರಾಹಕನನ್ನು ಉಳಿಸಿಕೊಳ್ಳುವ ತತ್ವ. ಅಂದಹಾಗೆ ಹಾಗೆ ಗ್ರಾಹಕನನ್ನು ಉಳಿಸಿಕೊಳ್ಳುವ ಆತ ಅದೇ ಗ್ರಾಹಕನ ವಿರುದ್ಧ ತಾನು ಅಸ್ಪೃಶ್ಯತೆ ಮಾಡಬಾರದು ಎಂದು ಖಂಡಿತ ಅಂದುಕೊಳ್ಳುವುದಿಲ್ಲ! ಯಾಕೆಂದರೆ ಅಸ್ಪೃಶ್ಯತೆ ಆಚರಣೆ ಅವನಿಗೆ same ಮದ್ಯಪಾನ ಮಾಡಿದಷ್ಟೇ ಕಿಕ್ ಕೊಡುತ್ತದೆ. ಇನ್ನು ಗುಂಪಿನಲ್ಲಿ ಆಚರಿಸಿದರೆ ಅದು ಪಾರ್ಟಿ ಮಾಡಿದಷ್ಟೆ ಮಜಾ ಆತನಿಗೆ ಅದು ಕೊಡುತ್ತದೆ. ಹೀಗಿರುವಾಗ ಅವನು ಹೇಗೆ ಅಸ್ಪೃಶ್ಯತೆ ನಿಲ್ಲಿಸುತ್ತಾನೆ?
ಇನ್ನು, ಅಸ್ಪೃಶ್ಯ ವರ್ಗದವರು ಅಸ್ಪೃಶ್ಯತೆ ನಿಲ್ಲಿಸಿ ಎಂದು ಆತನನ್ನು ಕೇಳಲಾಗುವುದಿಲ್ಲ. ಮುಖ್ಯವಾಗಿ ಅಲ್ಲಿ ಜಾತಿ ಜನಾಂಗದ ಸಮಸ್ಯೆ ಬರುತ್ತದೆ. ಕೇಳುವ ಆ ವ್ಯಕ್ತಿ ಆ ಕ್ಷಣಕ್ಕೆ ತನ್ನ ವಯಕ್ತಿಕ ಕೆಲಸ ಬಿಟ್ಟು ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಇನ್ನು, ಕೋರ್ಟು, ಕಚೇರಿ, ಪೋಲಿಸ್ ಠಾಣೆ... ಯಾರಿಗೆ ಬೇಕು ಆ ರಿಸ್ಕ್ ಎಂದು ಅಸ್ಪೃಶ್ಯ ವರ್ಗದ ಬಹುತೇಕ ಮಂದಿ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ, ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. It is a waste of time. ಬದಲಿಗೆ ಬುಡಕ್ಕೆ ಬೆಂಕಿ ಇಟ್ಟರೆ? ತಮ್ಮ ವ್ಯವಹಾರ ಶೈಲಿಯನ್ನು ಅಸ್ಪೃಶ್ಯ ಸಮುದಾಯಗಳೇ ಬದಲಿಸಿಕೊಂಡರೆ? ಈ ನಿಟ್ಟಿನಲ್ಲಿ ಅಸ್ಪೃಶ್ಯ ಸಮುದಾಯಗಳು ತಮ್ಮದೇ ಸ್ವಂತ ರಾಜಕೀಯ ಪಕ್ಷದ ಮಾದರಿಯಲ್ಲಿ ತಮ್ಮದೇ ಸ್ವಂತ ವ್ಯಾಪಾರ- ವ್ಯವಹಾರ, ಬಿಸಿನೆಸ್ , ಹೊಟೆಲ್... ಹೀಗೆ ಬಗೆ ಬಗೆಯ ಕ್ಷೇತ್ರಗಳಲ್ಲಿ ಮಾಲೀಕರಾಗಿ, ಕಡೇ ಪಕ್ಷ ಗ್ರಾಹಕರಾಗಿ ತೊಡಗಿಸಿಕೊಳ್ಳಬೇಕು. "ತಮ್ಮಿಂದ, ತಮ್ಮವರಿಗಾಗಿ, ತಮ್ಮವರಿಗೋಸ್ಕರ ವ್ಯಾಪಾರ ವ್ಯವಹಾರ" ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಸ್ಪೃಶ್ಯತೆಯ ಬೇಡಿ ಕಡಿದು ಬಿಸಾಡಬೇಕು.
*****
Comments
Post a Comment