-ರಘೋತ್ತಮ ಹೊ.ಬ
"ಏನಪ್ಪೊ, ಚಂದಾಗಿದಿಯ?" ರಂಗಣ್ಣ ಹೋಟೆಲ್ ಮಹದೇವಪ್ಪನ್ನ ಕೇಳಿದ. "ಬಾ ರಂಗ ಎಲ್ಲಾ ಕೊರೊನ. ಮಳ ಬ್ಯಳ ಬ್ಯಾರ ಕಿತ್ಕ ಹೊಯ್ತು. ಟೀ ಕೊಡ್ಲ, ಕುಡ್ದಯ" ಮಹಾದೇವಪ್ಪ ಹೇಳಿದ. "ತತ್ತ, ನಮ್ಮಪ್ಪನ್ ಕಾಲ್ದಿಂದ್ಲು ನಿನ್ ತಮೆ ತಾನ ನಾಮು ಟೀ ಕುಡಿಯದು" ರಂಗ ಉತ್ತರಿಸಿದ. "ಬುಡ್ಡ, ಆ ಕಾಲದ್ ಮಾತ್ ಯಾತಕ್ ಆಡಿಯೆ. ಎಲ್ಲಾ ಕೆಟ್ಟೊಯ್ತು. ನೋಡು ಅಮಾ ಸಂತೋಷ, ನನ್ ಎದುರ್ಗೈ ಕಾಲ್ ಮ್ಯಾಲ ಕಾಲಕ್ಕಂದ್ ಕೂತನೈ. ಕ್ಯೋಳಮು ಅಂದ್ರು ಅದ್ಯಾನ ಮಹಾನಾಯಕ.. ಅಂಬೇಡ್ಕರ್ರು... ಅಂತಾನೈ. ಅದೇಂಡ ಅಮಾ ಅಷ್ಟ್ ಬುದ್ಧಿವಂತನಾ? ನಮ್ ಬುದ್ಯವ್ರಿಗಿಂತ ಬುದ್ಧಿವಂತನಾ?"
"ಅಪ್ಪೋ, ಇದ್ಯಾನ್ ಹಿಂಗ್ ಅಂದೈ. ಮೊಕ್ಕ ಟೀ ಎರಚ್ ಬುಟ್ಟಾನು. ನಮ್ ಕಾಲದಲಿ ಏನೋ ಮೋಡ್ ಗಾಲ. ನೀಮ್ ಯೋಳ್ದಂಗ್ ಕ್ಯೋಳ್ಕಂಡ್ ಬಿದ್ದಿದ್ಮು. ಈಗ್ಲು ಅಂಗೆಯಾ? ಅದೇ, ನಿಮ್ಮವರ್ಗಾದ್ರೆ ಸ್ಟೀಲ್ ಲೋಟ. ನಮ್ಮವರ್ಗ ಪೇಪರ್ ಲೋಟ..." ರಂಗ ಹೇಳುತ್ತಿದ್ದ... "ಡೋ, ನಮ್ಮೂರ್ಲಿ ನೀರ್ಗ ಕಷ್ಟ ಅಂತ ನಿಂಗ್ ಗೊತ್ತಿಲ್ವಡ. ಅದುಕ್ಕೆ ಕಡ ಪೇಪರ್ ಲೋಟ, ಪೇಪರ್ ತಟ್ಟೆ. ಒಂದ್ ಕೆಲ್ಸ ಮಾಡ್ತೀನ್ ಬುಡು, ನಾಳಯಿಂದ ಬಾಳ ಯಲ ಕೊಡ್ತೀನಿ...".
"ಒಪ್ಪೊವ್, ನಿಮ್ಮವ್ರ್ ಗ್ಯಾಕ ಸ್ಟೀಲ್ ಲೋಟ ಕೊಟ್ಟಯಿ ಅದ್ಯೋಳು. ನಮ್ ಕರ್ಮ ಪೇಪರ್ ಲೋಟದಲ್ಲೆ ಕುಡಿತಿಮಿ. ಅದ್ಯೋಳು ಅದ್ಯಾಕ ನಿಮ್ಮವ್ರ್ ಗ ಸ್ಟೀಲ್ ಲೋಟ, ಸ್ಟೀಲ್ ತಟ್ಟೆ, ಒಳಕ್ಕೆ ಕರ್ಕಂದು ಇಕ್ಕತಿದೈ. ನಮ್ಮನ್ನ ಹೊರ್ಗ ಕಟ್ಟ ಮ್ಯಾಲ ಕೂರ್ಸಿ ಕೊಡ್ತಿದೈ. ನೋಡು ನಮ್ ಸಂತೋಷನ ತಂಟ್ಕ ಬರ್ ಬ್ಯಾಡ. ಅಮ ಅಂಬೇಡ್ಕರು ಬುದ್ಧ ಏನಾರ ಅಂದ್ಕಳ್ಳಿ. ಸಿಟಿ ಸೇರ್ಕಳ್ಳಿ ಬುಡಪ್ಪ. ಯ್ಯಾನ, ನಿನ್ ತಮೆ ಬಂದು ನನ್ ಥರಾನೆ ಪೇಪರ್ ಲೋಟ.. ಪೇಪರ್ ತಟ್ಟೆ.. ಥೂ! ಅದೆ, ಮಾನಾಯ್ಕದಲ್ಲಿ ತೋರಿಸ್ ದ್ರಲ್ಲ ಕಂಟ ಕಟ್ಕಂಡು ಬರ್ಬೇಕ? ಕಸಬಳ್ಳು ಕಟ್ಕಂಡು ಬರ್ಬೇಕ? ಒಬ್ಬರ್ಗೊಂತರ ಕೊಡದ್ನ ಮಾಡದ್ನ ನಿಲ್ಸು. ಜನ ಎಚ್ಚತ್ಗಂಡರ. ನೋಡು, ಹಿಂಗೆ ಆದ್ರ ನಾನೆ ಒಂದ್ ಹೋಟ್ಲು ತಗತಿನಿ. ಎಲ್ಲರ್ಗು ಸ್ಟೀಲ್ ತಟ್ಟೆ ಸ್ಟೀಲ್ ಲೋಟ... ಅದೆ ಸರಿ... ಅದೆ ಸರಿ. ನೀಮ್ ಈ ಕಾಲಕ್ಕ ಉದ್ಧಾರ ಆಗಲ್ಲ... ನ್ಯಡ್ಡ ಸಂತೋಸ, ಅದ್ಯಾನ್ ಕಿಂತ್ಕಂಡನು ಇಮ. ನಾಮೇ ಒಂದ್ ಹೊಟ್ಲು ತಗೆಯಮ್ ಕಡ. ನಾಮೆ ಕುಡಿಯಮ್ ಕಡ, ನಾಮೆ ಉಣ್ಣಮು.. ಸ್ಟೀಲ್ ಲೋಟದಲ್ಲೆ ಸ್ಟೀಲ್ ತಟ್ಟೆಲೇ.. ಸ್ಟೀಲ್ ತಟ್ಟೆಲೇ...
***
Comments
Post a Comment