-ರಘೋತ್ತಮ ಹೊ.ಬ
ಮೊನ್ನೆ ಒಂದಷ್ಟು ಯುವಕರು ಸಿಕ್ಕಿದ್ದರು. "ಜೈಭೀಮ್ಸರ್" ಎಂದ ಎಲ್ಲರೂ "ಏನ್ ಮಾಡ್ತಿದೀರಪ್ಪ, ಏನ್ ಓದಿದೀರಪ್ಪ" ಅಂದಾಗ "ಎಸ್ ಎಸ್ ಎಲ್ ಸಿ ಸರ್" ಅಂದರು. ಮುಂದೆ ಓದ್ನಿಲ್ವ? ಅಂದಾಗ ಒಬ್ಬ ಮಾತ್ರ "ಪಿಯುಸಿ ಸರ್" ಅನ್ನುತ್ತ ಉಳಿದವರೆಲ್ಲ ಮುಖ ಕೆಳಗು ಮಾಡಿದರು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಇಂದಿನ ಶಿಕ್ಷಣದ ಮಟ್ಟವಿದು. ಒಂದೆಡೆ ಶೋಷಕ ವ್ಯವಸ್ಥೆ ಇವರು ಶಿಕ್ಷಣ ಪಡೆಯಬಾರದು ಎಂಬಂತೆ ನೀತಿ ರೂಪಿಸುತ್ತಿದ್ದರೆ ಮತ್ತೊಂದೆಡೆ ಇವರು ತಾವು ಓದಬೇಕು, ಮುಂದೆ ಬರಬೇಕು ಎಂಬ ಕನಿಷ್ಠ ಗ್ಯಾನ ಕೂಡ ಮಾಡದೆ ಹತ್ತನೇ ತರಗತಿ ಹಂತಕ್ಕೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಹಾಗೆ ಅಲ್ಲಿಂದಲೇ ಪ್ರಾರಂಭ ಕುಡಿತ, ಜೂಜು, ರೌಡಿಸಂ ನಂತಹ ಕಾನೂನುಬಾಹಿರ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ನಡವಳಿಕೆಗಳು.
ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರು ಎಷ್ಟು ಓದಿದ್ದರು? ಬಹುಶಃ ಇತಿಹಾಸ ಅದನ್ನು ಈಗಲೂ ಒಂದು ದಾಖಲೆ ಎಂದೇ ಪರಿಗಣಿಸಬೇಕಾಗುತ್ತದೆ ಆ ಮಟ್ಟಿಗೆ ಡಾ.ಅಂಬೇಡ್ಕರರು ಓದಿದರು. ದೂರದ ಅಮೆರಿಕದಲ್ಲಿ ಎಂ.ಎ, ಪಿಹೆಚ್ಡಿ, ಲಂಡನ್ ನಲ್ಲಿ ಎಂ.ಎಸ್ಸಿ, ಡಿಎಸ್ಸಿ, ಬಾರ್ - ಅಟ್- ಲಾ, ಜರ್ಮನಿಯಲ್ಲೂ ತುಸು ಸಮಯ ವ್ಯಾಸಂಗ... ಅರೆ, ನಮ್ಮ ಹುಡುಗರು ಎಸ್ ಎಸ್ ಎಲ್ ಸಿ ಗೆ ನಿಂತು ಹೋಗುತ್ತಿದ್ದಾರೆ! ಇದ್ಯಾಕೆ ಅಂತ? ಅದರಲ್ಲೂ ಅವರ ಮೊಬೈಲ್ ಗಳಲ್ಲಿ ಜೈಭೀಮ್, ಬುದ್ಧ, ಅಂಬೇಡ್ಕರರ ವಾಲ್ ಪೇಪರ್ ಗಳು, ಫೇಸ್ ಬುಕ್ ವ್ಯಾಟ್ಸಪ್ ಗಳಲ್ಲೂ ಅಂಬೇಡ್ಕರರ ಪ್ರೊಫೈಲ್ ಫೋಟೊಗಳು. ಆದರೆ ಎಷ್ಟು ಓದಿದಿಯಾ ಎಂದು ಕೇಳಿದಾಗ ಎಸ್ ಎಸ್ ಎಲ್ ಸಿ ಎಂಬ ಕಂಠಪಾಠ.
ದುರಂತದ ಸ್ಥಿತಿ ಇದು. ಯಾವ ಬಾಬಾಸಾಹೇಬ್ ಅಂಬೇಡ್ಕರರು ತನ್ನ ಜನ ಶಿಕ್ಷಣದಲ್ಲಿ ಮುಂದೆ ಬರಲಿ ಎಂದು ಶೈಕ್ಷಣಿಕ ಮೀಸಲಾತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಇತ್ಯಾದಿ ಕೊಡಿಸಿದರೊ ಅವರಮ ಕ್ಕಳು ಇಂದು ರೌಡಿಗಳು, ಕಡಿಮೆ ದುಡಿಮೆಯ ಕೂಲಿಗಳು, ಕುಡಿದು ತೂರಾಡಿ ಬೀಳುವ ಸಮಾಜಘಾತುಕರಾಗುತ್ತಿದ್ದಾರೆ. ಸ್ವಲ್ಪವೂ ಜವಾಬ್ದಾರಿ ಇಲ್ಲದ ಮುಂದಿನ ಕರಾಳ ಭವಿಷ್ಯದ ಅರಿವಿಲ್ಲದ ಬೇಜವಾಬ್ದಾರಿ ಪ್ರಜೆಗಳಾಗುತ್ತಿದ್ದಾರೆ.
ವಾಸ್ತವ ಎಂದರೆ ದೌರ್ಜನ್ಯ ಮಾಡಲು ಸದಾ ತಯಾರಾಗಿ ನಿಂತಿರುವ ಆಳುವ ಮನುವಾದಿ ಜನಾಂಗಗಳು ಇವರಿಗಾಗಿ ಚಿತ್ರ ವಿಚಿತ್ರ ಕಾನೂನು ಮಾಡುತ್ತ ತಯಾರಾಗಿ ನಿಂತಿವೆ. ನಮ್ಮಂತಹವರು "ಅಯ್ಯೋ, ಇದರ ಬಗ್ಗೆ ನಾವು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವಲ್ಲ" ಎಂದು ಬೆಂದು ಬಸವಳಿಯುತ್ತಿದ್ದೇವೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಯುವಕರಿಗೆ ಯುವತಿಯರಿಗೆ ಇದ್ಯಾವುದು ಅರಿವಾಗುತ್ತಿಲ್ಲ. ಬಹುಶಃ ನಮ್ಮಂತಹ ಪ್ರಜ್ಞಾವಂತಿಕೆಯ ಜನ ಈ ಯೋಚನೆಯೇ ತಪ್ಪೇನೊ ಎಂಬಂತೆ ಇವರ ಗಾಢ ನಿದ್ರೆ, ಉದಾಸೀನ ನಡೆ ಇದೆ. ಯಾಕೆಂದರೆ ಇಂದು ಯಾವುದೇ ಅಂಬೇಡ್ಕರ್ ಬಡಾವಣೆ, ಜಗಜೀವನ್ ರಾಮ್ ಬೀದಿ, ಪೌರಕಾರ್ಮಿಕರ ಕಾಲೋನಿಯಲ್ಲಿ ಯಾರೇ ಹೋಗಿ ನೋಡಿ ಶಿಕ್ಷಣ ಅಲ್ಲಿ ಬೆಳೆಯಲಾರದೆ ನರಳುತ್ತಿದೆ. ಪೋಷಕರ ಅಜ್ಞಾನ, ಅನಾದರ, ಮಕ್ಕಳ ಕಾಳಜಿ ಇಲ್ಲದಿರುವ ಮನಸ್ಸು ಒಂದೆಡೆ... ಯುವಕರ ಯುವತಿಯರ ಶಿಕ್ಷಣದ ಬಗೆಗಿನ ಬೇಜವಾಬ್ದಾರಿತನ ಇನ್ನೊಂದೆಡೆ. ಈ ನಡುವೆ ಇವರ ಶಿಕ್ಷಣ ಹೀಗೆ ಹಾಳಾಗಬೇಕು ಎಂದು ಬಯಸುವ ಮನುವಾದಿ ಸಮಾಜಕ್ಕೆ ಇವರ ಈ ನಡೆ ಹಾಲು ಅನ್ನ ಉಂಡಂತಾಗುತ್ತಿದೆ!
ಶತ ಶತಮಾನಗಳಿಂದ ಅಕ್ಷರ ಕಲಿಯಬೇಡಿ ಎಂದು ದೂರ ತಳ್ಳಲ್ಪಟ್ಟ ಜನರಿಗೆ ಅಕ್ಷರದ ಅವಕಾಶ ಕೊಡಿಸಲು ಬಾಬಾಸಾಹೇಬ್ ಅಂಬೇಡ್ಕರರು ಪಟ್ಟ ಶ್ರಮ, ಅವರ ಓದಿನ ಬದುಕೇ ಇದಕ್ಕೆ ಒಂದು ಉದಾಹರಣೆ. ಆದ್ದರಿಂದ ಈಗಲೂ ತಡವಾಗಿಲ್ಲ ಶೋಷಿತ ಸಮುದಾಯಗಳ ಯುವಕರು/ ಯುವತಿಯರು/ ವಿದ್ಯಾರ್ಥಿಗಳು
ಕನಿಷ್ಠ ಪಕ್ಷ ಪದವಿ ಮಟ್ಟಕ್ಕೆ ಓದುತ್ತೇವೆ ಎಂಬ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಮದ್ಯಪಾನ, ರೌಡಿಸಂ, ಅರ್ಧಕ್ಕೆ ಕಾಲೇಜು ಬಿಡುವ ವ್ಯಸನದಿಂದ ಮುಕ್ತರಾಗಿ ಶಿಕ್ಷಣವೆಂಬ ಹುಲಿಯ ಹಾಲ ಕುಡಿಯಬೇಕು. ಅನ್ನ ಇಲ್ಲದಿದ್ದರೂ ಜ್ಞಾನ ನಮ್ಮ ಮನೆಯಲ್ಲಿ ಬಿದ್ದು ಒದ್ದಾಡುತ್ತಿದೆ ಎಂದು ನೋಡಿಕೊಳ್ಳಬೇಕು. ಆಗಷ್ಟೇ ಶತಶತಮಾನದ ನಮ್ಮ ನೋವು ಶಮನವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳ ಯುವಕರು ಯುವತಿಯರು ಇತ್ತ ಗಮನಹರಿಸಲಿ, ತಮ್ಮ ಮನೆಗಳಲ್ಲಿ ಶಿಕ್ಷಣದ ಜ್ಯೋತಿ ಆರದಂತೆ ನೋಡಿಕೊಳ್ಳಲಿ.
***
#ದಲಿತರು #ಶಿಕ್ಷಣ
Comments
Post a Comment