-ರಘೋತ್ತಮ ಹೊ.ಬ
ಒಂದು ಓಟದ ಸ್ಪರ್ಧೆ ( ಅದು ಎಂದೂ ಮುಗಿಯದ ಸ್ಪರ್ಧೆ). ಅಂದಹಾಗೆ ಆ ಓಟದಲ್ಲಿ ಈಗಾಗಲೇ ನೂರಾರು ಮೈಲಿ ಓಡಿರುವವರು ಕೆಲವರು ಇನ್ನೂ ಆರಂಭದ ಗೆರೆಯಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ಇರುವವರು. ಆರಂಭದ ಗೆರೆಯಲ್ಲಿ ಇರುವವರು "ನೀವು ಓಡುವಂತಿಲ್ಲ ಎಂಬ ಕಾನೂನು ನಿರ್ಬಂಧದ ಮೂಲಕ ತಡೆಯಲ್ಪಟ್ಟವರು, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಹಳ ಹಿಂದೆಯೇ ಉಳಿಯಲ್ಪಟ್ಟವರು, ಈಗಲೂ ನಿಮ್ಮ ಕೈಯಲ್ಲಿ ಆಗಲ್ಲ ಎಂಬ ಆತ್ಮವಿಶ್ವಾಸ ದ ಕೊರತೆಯಿಂದ ನರಳುತ್ತಿರುವವರು..". ಖಂಡಿತ, ಈ ದೃಷ್ಟಾಂತ ದಲಿತರ ಬಿಸಿನೆಸ್ ಗೆ ಸಂಬಂಧಿಸಿದ್ದು. ಮನುಸ್ಮೃತಿಯಂತಹ ಕಾನೂನುಗಳ ಮೂಲಕ ಇವರಿಗೆ ವ್ಯಾಪಾರ ವ್ಯವಹಾರ ಮಾಡಲು ಶತಶತಮಾನಗಳು ತಡೆಯೊಡ್ಡಲಾಗಿದೆ. ಅಸ್ಪೃಶ್ಯತೆ ಮೂಲಕ " ಅಯ್ಯೋ , ನಮ್ಮ ಕೈಯಲ್ಲಿ ಆಗೋದೆ ಇಲ್ಲ " ಎಂಬ ಮಟ್ಟಕ್ಕೆ ಇವರನ್ನು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತಂದು ನಿಲ್ಲಿಸಲಾಗಿದೆ!
ಆದರೆ ಸದ್ಯದ ಅಪರೂಪದ ವಾಸ್ತವ ಎಂದರೆ ಕೊರೊನ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ನೂರಾರು ಮೈಲಿ ಓಡಿ ಮುಂದೆ ಹೋಗಿದ್ದವರು ಮತ್ತೆ ವಾಪಸ್ ಆರಂಭಿಕ ಗೆರೆಗೆ ಬಂದಿದ್ದಾರೆ. ದಲಿತರ ಜೊತೆಗೆ ನಿಂತಿದ್ದಾರೆ ಅಥವಾ ದಲಿತರು ಅವರ ಜೊತೆ ಇಂದು ಸ್ಪರ್ಧೆ ಮಾಡಲು ಸುಸಮಯ. ಯಥಾಪ್ರಕಾರ ದಲಿತರಿಗೆ ಬಂಡವಾಳ, ಆತ್ಮವಿಶ್ವಾಸ, ನಮ್ಮ ಕೈಯಲ್ಲಿ ಆಗುತ್ತಾ, ನಾವು ಮಾಡಬಹುದಾ ಎಂಬ ಆಲೋಚನೆಗಳು ತೊಡಕಾಗಿ ಕಾಣುತ್ತವೆ. ಆದರೆ ಸ್ಪರ್ಧೆಗೆ ಇಳಿದ ಮೇಲೆ ಭಾಗವಹಿಸಲೇಬೇಕು ಓಡಲೆ ಬೇಕು. ಓಡದಿದ್ದರೆ ಇನ್ನೆಂದೂ ವಿಮೋಚನೆ ಸಾಧ್ಯವಿಲ್ಲ. ಹಾಗೆಯೇ ನಮ್ಮನ್ಯಾರೂ ದೇವಲೋಕದಿಂದ ಅಥವಾ ಸಿನಿಮಾಗಳಲ್ಲಿ ತೋರುವಂತೆ ಅನ್ಯ ಗ್ರಹ ಜೀವಿಗಳು ಕರೆದುಕೊಂಡು ಹೋಗುವುದಿಲ್ಲ. ನಾವೇ ಓಡಬೇಕು, ಓಡಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಲಾಕ್ ಡೌನ್ ನ ಈ ಸಮಯ ಎಲ್ಲರ ಜೊತೆ ಸಮಾನ ಸ್ಪರ್ಧೆ ಆರಂಭಿಸಲು ಖಂಡಿತ ಸುಸಮಯ.
ಆಗಬೇಕಾದ್ದೆಂದರೆ ಮೈಕೊಡವಿ ಏಳಬೇಕಿರುವುದು. ಆದದ್ದು ಆಗುತ್ತದೆ ಒಂದು ಕೈ ನೋಡೇ ಬಿಡುವ ಎಂಬ ಚಾಲೆಂಜ್ ಈಗ ಬೇಕಿರುವುದು. ವ್ಯಾಪಾರ ವ್ಯವಹಾರ ನಷ್ಟ ಆಗುತ್ತದಾ? ಆಗಲಿ. ನಷ್ಟ ನಮಗೆ ಹೊಸದೇನಲ್ಲ ತಾನೇ? ಲಾಭ ಬಂದರೆ ? ನಮ್ಮ ಸಮುದಾಯದ ಬದುಕೇ ಬದಲಾಗುತ್ತದೆ. ದಿಕ್ಕೇ ಬದಲಾಗುತ್ತದೆ. ಅಂದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಲ್ಲಾ ಪಡೆದುಕೊಳ್ಳುವುದೇ ಆಗಿದೆ. ಇದನ್ನೇ ಡಾ.ಅಂಬೇಡ್ಕರ್ ರವರು ಹೇಳಿರುವುದು.
ಎಷ್ಟೋ ಜನ ದಲಿತರು ವಿಶೇಷವಾಗಿ ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ತಮ್ಮ ಹಾಗೆ ಸರ್ಕಾರಿ ನೌಕರಿ ಕೊಡಿಸುವ ಕುರುಡು ಮಾತಾಡುತ್ತಾರೆ. ಆದರೆ ಒಂದು ವಾಸ್ತವ, ಸರ್ಕಾರಿ ನೌಕರಿ ವಂಶಪಾರಂಪರ್ಯವಲ್ಲ. ಆದರೆ ವ್ಯಾಪಾರ ವ್ಯವಹಾರ, ಬಿಸಿನೆಸ್ ವಂಶಪಾರಂಪರ್ಯ. ತಂದೆ ಮಾಡಿಟ್ಟರೆ ಮಗ ಅದನ್ನು ಮುಂದುವರೆಸಬಹುದು. ಆ ಮೂಲಕ ಸಮುದಾಯ ಕೂಡ ಶ್ರೀಮಂತ ಆಗುತ್ತದೆ. ಇಂತಹ ಶ್ರೀಮಂತರು ದಲಿತ ಸಮುದಾಯದಲ್ಲಿ ಹೆಚ್ಚು ಹೆಚ್ಚು ಬೆಳೆದರೆ ಅಲ್ಲಿ ಇಡೀ ಸಮುದಾಯಕ್ಕೆ ಆತ್ಮವಿಶ್ವಾಸ ಸಿಗುತ್ತದೆ. ನಿಂದನೆ, ಅಪಮಾನ ತಾನಾಗೇ ಕಡಿಮೆಯಾಗುತ್ತದೆ.
ಬಿಸಿನೆಸ್ ಆರಂಭಿಸುವಾಗ ನಾವು ದಲಿತರು ನಮ್ಮ ಹತ್ತಿರ ಯಾರು ಬರುತ್ತಾರೆ? ಎಂಬ ಪ್ರಶ್ನೆ ಬಂದೇ ಬರುತ್ತದೆ. ಅಂದಹಾಗೆ ನಾವು ಏನೂ ಮಾಡದೆ ಮನೆಯಲ್ಲಿ ಕುಳಿತರು ಕೂಡ ನಾವು ದಲಿತರೆ! ಆಗಲಾದರೂ ನಮ್ಮ ಬಳಿ ಯಾರಾದರೂ ಬರುತ್ತಾರಾ? ಇಲ್ಲ. ಆದ್ದರಿಂದ ನಾವು "ನಾವು ದಲಿತರು, ನಮ್ಮನ್ನು ಅಸ್ಪೃಶ್ಯತೆ ಕಾಡುತ್ತದೆ" ಎಂಬ basic ಚಿಂತನೆ ಅರಬ್ಬೀ ಸಮುದ್ರಕ್ಕೆ ಎಸೆದು ಏಳಬೇಕು. ಯಾವುದಾದರೊಂದು ಫುಟ್ ಪಾತ್ ವ್ಯಾಪಾರ ವ್ಯವಹಾರ ಆದರೂ ಸರಿ ಆರಂಭಿಸಬೇಕು. ಒಂದು ಟೀ ಅಂಗಡಿ, ಒಂದು ಹೊಟೆಲ್, ಒಂದು ದಿನಸಿ ಅಂಗಡಿ, ಬಟ್ಟೆ ಅಂಗಡಿ... ಹೀಗೆ. ಅಂತಿಮವಾಗಿ ಲೇಖನ ಲಾಭ ಬಂದೇ ಬರುತ್ತದೆ. ಈಗಲ್ಲದಿದ್ದರೂ ನಮ್ಮ ಮಕ್ಕಳ ಕಾಲಕ್ಕೆ ಮೊಮ್ಮಕ್ಕಳ ಕಾಲಕ್ಕೆ ಬಂದೇ ಬರುತ್ತದೆ. ಆಗ ನಮ್ಮ ಮುಂದಿನ ಭವಿಷ್ಯದ ಜನಾಂಗ "ನಿಮ್ಮ ತಾತ ಏನ್ ಮಾಡ್ತಿದ್ದ?" ಎಂದು ಯಾರಾದರೂ ಪ್ರಶ್ನೆ ಕೇಳಿದರೆ "ವ್ಯಾಪಾರ ವ್ಯವಹಾರ ಮಾಡ್ತಿಧ" ಎಂದು ಹೇಳುತ್ತದೆ.
ಈ ನಿಟ್ಟಿನಲ್ಲಿ ಅವರು ಹೇಳಬೇಕಾದರೆ ಹೇಳುವಂತಾಗಬೇಕಾದರೆ ಹಾಲಿ ದಲಿತರು ಅದು ರಾಜ್ಯದಲ್ಲಿ ಒಂದು ಕೋಟಿಗೂ ಮಿಕ್ಕಿ ಒಂದು ದೇಶದ ಜನಸಂಖ್ಯೆಯಷ್ಟಿರುವ ದಲಿತರು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು. ಲಾಕ್ ಡೌನ್ ತೆರವಿನ ಈ ಸಮಯ ದಲಿತರು ವ್ಯಾಪಾರ ವ್ಯವಹಾರ ದಲ್ಲಿ ತೊಡಗಿಸಿಕೊಳ್ಳಲು ಸುಸಮಯ ಎಂಬುದನ್ನು ಅರಿಯಬೇಕು.
***
Comments
Post a Comment