-ರಘೋತ್ತಮ ಹೊ.ಬ
ಗುಲಾಮಗಿರಿ ಇದು ಅಮೆರಿಕಾದಲ್ಲಿ ಇರುವ ಪದ್ಧತಿ ಎಂದು ಎಲ್ಲರೂ ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ನಿಜ, ಅಮೆರಿಕದಲ್ಲಿ ಇದೆ. ಆದರೆ ಅಲ್ಲಿ ತುಂಬಾ ಸರಳವಾಗಿ, ಎಲ್ಲರೂ ಗುರುತಿಸುವಂತಹ ಕಪ್ಪು ಬಿಳಿ ಎಂಬಂತೆ ಇದೆ. ಪರಿಹಾರವೂ ಸರಳ. ಆದರೆ ಭಾರತದಲ್ಲಿ ಜಾತಿ ವ್ಯವಸ್ಥೆ ತುಂಬಿರುವ ನಮ್ಮಲ್ಲಿ ಗುಲಾಮಗಿರಿ ಸಂಕೀರ್ಣ ಅವಸ್ಥೆಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಕಪ್ಪು ಜನರಿಗೆ ಭಾರತದ ದಲಿತರು ಹೋಲಿಕೆಯಾಗುತ್ತಾರೆಯೇ? ಉತ್ತರ: ಮೇಲ್ನೋಟದ ಹೋಲಿಕೆಯಾಗಬಹುದು. ಆದರೆ ಆಳದಲ್ಲಿ ಸಮಸ್ಯೆ ತೀವ್ರ ಭಿನ್ನವಾಗಿರುತ್ತದೆ, ಗೊಂದಲ ಗೋಜಲುಗಳಿಂದ ತುಂಬಿರುತ್ತದೆ. ತುಂಬಿರುವಂತೆ ಶೋಷಕ ಶಕ್ತಿಗಳು, ಅವರ ಚಿಂತನೆಗಳು, ಚಟುವಟಿಕೆಗಳು ವ್ಯವಸ್ಥೆಯನ್ನು ಹಾಗೆ ಮಾಡುತ್ತಿರುತ್ತವೆ. ಆ ಶೋಷಕ ವ್ಯವಸ್ಥೆಗೆ ತನ್ನದೆ ದೇಶದ ಪ್ರಜೆಗಳಾದ ದಲಿತರು ಅಕ್ಷರ ಕಲಿಯುವುದು ಬೇಕಿರುವುದಿಲ್ಲ! ವಿಜ್ಞಾನ- ತಂತ್ರಜ್ಞಾನ, ವ್ಯಾಪಾರ - ವ್ಯವಹಾರ ಯಾವುದರಲ್ಲೂ ಮುಂದೆ ಬರುವುದು ಬೇಕಿರುವುದಿಲ್ಲ! ಕಡೆ ಪಕ್ಷ ಶುಚಿಯಾಗಿರುವುದನ್ನು, ಸ್ವಾಭಿಮಾನಿಗಳಾಗಿರುವುದನ್ನು ಬಯಸುವುದಿಲ್ಲ! ಬೇಕಿದ್ದರೆ ತಮ್ಮ ಮನೆಗಳಿಗೆ ವಿದೇಶಿಯರನ್ನು ಆಹ್ವಾನಿಸುತ್ತಾರೆಯೇ ಹೊರತು ಸ್ವದೇಶಿ ದಲಿತರನ್ನು ಆಹ್ವಾನಿಸುವುದಿಲ್ಲ, ಅವರ ಏಳಿಗೆ ಬಯಸುವುದಿಲ್ಲ.
ಅಂತಹ ಸ್ವದೇಶಿ ಜನರ ಏಳಿಗೆ ಬಯಸದ ಶೋಷಕ ವ್ಯವಸ್ಥೆ ಮತ್ತು ಜನ ಇರುವ ಪದ್ಧತಿ ನಮ್ಮದು. ಆದ್ದರಿಂದ ಹೇಳಿದ್ದು ನಮ್ಮಲ್ಲಿ ಇರುವ ಗುಲಾಮಗಿರಿ ಪದ್ಧತಿ ತುಂಬಾ ಸಂಕೀರ್ಣ, ಅರ್ಥಮಾಡಿಕೊಳ್ಳಲು ಕಷ್ಟ ಎಂದು. ಆದರೆ ಒಂದು ವಾದ ಅಥವಾ ಚಿಂತನೆ ಕಲಿತರೆ ಅಥವಾ ಆ ಹಾದಿಯ ನಿರಂತರ ತಿಳುವಳಿಕೆಯಲ್ಲಿ ನಡೆದರೆ ಗುಲಾಮಗಿರಿಯಲ್ಲಿ ನರಳುತ್ತಿರುವವರು ವಿಶೇಷವಾಗಿ ದಲಿತರು ಗುಲಾಮಗಿರಿಯಿಂದ ಹೊರಬರಬಹುದು ಅಥವಾ ತಮಗೆ ತಾವೇ ಗುಲಾಮಗಿರಿಗೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬಹುದು. ಆ ವಾದ ಅಥವಾ ತಿಳುವಳಿಕೆ ಅದು ಅಂಬೇಡ್ಕರ್ ವಾದವಾಗಿದೆ ಎಂದು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ.
ಅಂದಹಾಗೆ ಗುಲಾಮಗಿರಿ ದಲಿತರಲ್ಲಿ ಈಗಲೂ ನೂರಕ್ಕೆ ನೂರು ಇದೆಯಾ? ಅಲ್ಲಿ ಸ್ಥಿತ್ಯಂತರ ಆಗುತ್ತಿಲ್ಲವೆ? ಪಲ್ಲಟ ಆಗುತ್ತಿಲ್ಲವೆ? ಆಗುತ್ತಿದೆ, ಪಲ್ಲಟ ನಡೆಯುತ್ತಿದೆ. ಆದರೆ ಒಂದು ವಾಸ್ತವ, ಆ ಸ್ಥಿತ್ಯಂತರ ಶಾಶ್ವತ ಅಲ್ಲ. ಮೈಮರೆತರೆ ಒಂದು ತಲೆಮಾರು ಎಚ್ಚೆತ್ತ ಸಮುದಾಯ ಮತ್ತೊಂದು ತಲೆಮಾರಿಗೆ ಮತ್ತೆ ಗುಲಾಮಗಿರಿಗೆ ಹೋಗುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ ದಲಿತರನ್ನು ಗುಲಾಮಗಿರಿಯ ದೃಷ್ಟಿಯಿಂದ ನಾವು ಮೂರು ಗುಂಪುಗಳಾಗಿ ವಿಂಗಡಿಸಬಹುದು.
1.ಎಚ್ಚೆತ್ತುಕೊಂಡು ಸ್ವಾಭಿಮಾನಿಗಳಾಗಿ ಬದುಕುತ್ತಿರುವವರು.
2.ಎಚ್ಚೆತ್ತುಕೊಂಡರೂ ಸ್ವಾರ್ಥಕ್ಕಾಗಿ ಗುಲಾಮರಾಗುತ್ತಿರುವವರು.
3.ಎಚ್ಚೆತ್ತುಕೊಳ್ಳದೆ, ತಮ್ಮ ಹಕ್ಕುಗಳ ಬಗ್ಗೆ ಸ್ವಲ್ಪವೂ ಅರಿಯದೆ, ಗುಲಾಮಗಿರಿಯಲ್ಲಿಯೇ ಮುಂದುವರಿಯುತ್ತಿರವವರು.
ಎಚ್ಚೆತ್ತುಕೊಂಡು ಸದಾ ಎಚ್ಚರಿಕೆಯಿಂದ ಸ್ವಾಭಿಮಾನಿಗಳಾಗಿ ಬದುಕುವವರು: ಬಹುತೇಕರು ಇದೇ ಗುಂಪು ಅಥವಾ ವರ್ಗದಲ್ಲಿ ಇರಬೇಕೆಂದು ನಮ್ಮ ಆಶಯ ಅಥವಾ ಮಾನವೀಯತೆಯುಳ್ಳ ಎಲ್ಲರ ಆಶಯ. ಇನ್ನು ಎಚ್ಚೆತ್ತುಕೊಂಡು ಕೂಡ ಗುಲಾಮರಾಗಿರ ಬಯಸುವವರು ಅಥವಾ ಇಡೀ ಸಮುದಾಯದ ಗುಲಾಮಗಿರಿ ಬಯಸುವವರು ಮೊದಲೇ ಹೇಳಿದ ಹಾಗೆ ಸ್ವಾರ್ಥಿ ಜನರಾಗಿದ್ದಾರೆ. ರಾಜಕಾರಣಿಗಳು, ಕೆಲವು ಬಿಸಿನೆಸ್ ಜನರು, ಅಧಿಕಾರಿಗಳು ಇಂತಹವರು ಇಲ್ಲಿ ಬರುತ್ತಾರೆ. ಅಕಸ್ಮಾತ್ ನಾನು ಈ ಪಟ್ಟಿಯಲ್ಲಿ ಬರುವುದಿಲ್ಲ ಅಥವಾ ಬರಲು ಇಚ್ಛಿಸುವುದಿಲ್ಲ ಎಂದು ಯಾರಾದರೂ ಅಂದುಕೊಂಡರೆ ಅದಕ್ಕಿಂತ ಖುಷಿ ವಿಚಾರ ಬೇರೊಂದಿರಲಿಕ್ಕಿಲ್ಲ.
ಇನ್ನು ಕೊನೆಯ ಗುಂಪು; ಇದು ತುಂಬಾ ಅಪಾಯ ಎದುರಿಸುತ್ತಿರುವ ಗುಂಪು. ಈ ಗುಂಪಿಗೆ ತನ್ನ ಈ ಪರಿಸ್ಥಿತಿಗೆ ಕಾರಣ ಏನು ಎಂದು ತಿಳಿದಿರುವುದಿಲ್ಲ ಅಥವಾ ತಿಳಿಯಲು ಯತ್ನಿಸುವುದಿಲ್ಲ. ಹಾಗೆ ತನ್ನ ಕೈಯಲ್ಲಿ ಏನೂ ಆಗುವುದಿಲ್ಲ, "ಬಡವ ನೀ ಮಡಗ್ದಂಗಿರು" ಎಂದು ಅಂತಹವರು ಬದುಕುತ್ತಾರೆ. ತಲೆ ತಲಾಂತರದಿಂದ ಬಂದ ತಮ್ಮ ಕೀಳು ಕುಲಕಸುಬು, ಅಶೌಚಿತ್ವದ ಬದುಕು, ಬದುಕಿನ ವಾತಾವರಣ... ಮನೆ, ಹಳ್ಳಿ, ಬೀದಿಯೆ ಶ್ರೇಷ್ಠ ಎಂಬ ನಿಲುವು... ಖಂಡಿತ, ತುಂಬಾ ಅಪಾಯದಲ್ಲಿರುವವರೆ ಈ ಬಗೆಯ ಜನ. ಮುಖ್ಯವಾಗಿ ಇವರಿಗೆ ಯಾವುದೇ ಜಾಗೃತಿ ಮೂಡಿಸುವ ಆದರ್ಶ ವ್ಯಕ್ತಿ ಇರುವುದಿಲ್ಲ. ಜಾತಿ ವ್ಯವಸ್ಥೆ ಕೂಡ ಅವರಿಗೆ ಅಂತಹ ಆದರ್ಶಗಳನ್ನು ಒಪ್ಪದಂತೆ ಮಾಡಿರಬಹುದು ಅಥವಾ ಕಡಿಮೆ ಶಿಕ್ಷಣ ತಮ್ಮಲ್ಲಿಯೇ ಅಂತಹ ಆದರ್ಶ ಸೃಷ್ಟಿಯಾಗದಂತೆ ನೋಡಿಕೊಂಡಿರಬಹುದು. ಈ ನಿಟ್ಟಿನಲ್ಲಿ ದಲಿತ ಸಮುದಾಯದ ಒಟ್ಟಾರೆ ಪ್ರಗತಿ ಅಳೆಯುವಿಕೆಗೆ ಇವರ ಪಾಲೇ ಅಧಿಕ.
ಇನ್ನು ಶೋಷಕರ ಬಗ್ಗೆ ಹೇಳುವುದಾದರೆ, ಎಚ್ಚೆತ್ತುಕೊಂಡು ಸ್ವಾಭಿಮಾನಿಗಳಾಗಿರುವವರನ್ನು ಶೋಷಕ ಸಮುದಾಯ ಕೆಣಕುವುದಿಲ್ಲ. ಆದರೆ ಈ ಗುಂಪು ಎರಡನೇ ಗುಂಪಿಗೆ ಬರುತ್ತದಾ ಎಂದು ಶೋಷಕರು ಕಾಯುತ್ತಿರುತ್ತಾರೆ. ಆಗ ಇವರನ್ನು ಗಬಕ್ ಎಂದು ಹಿಡಿದುಬಿಡುತ್ತಾರೆ. ಇನ್ನು ಎರಡನೇ ಗುಂಪು; ಶೋಷಕರು ಇವರನ್ನು ಸದಾ ದಾಳದಂತೆ ಬಳಸಿಕೊಳ್ಳುತ್ತಾರೆ ಅಥವಾ ಇವರು ಬಳಸಲ್ಪಡುತ್ತಾರೆ. ಇವರಿಗೆ ಸಣ್ಣಪುಟ್ಟ ಅಧಿಕಾರದ ಆಮಿಷ ನೀಡಿ ಅಥವಾ ನಿಜವಾಗಿಯೂ ನೀಡುತ್ತ ಇಡೀ ಸಮುದಾಯಕ್ಕೆ ನೀಡಿದ್ದೇವೆ ಎಂದು ಹೊರಜಗತ್ತಿಗೆ ಬಿಂಬಿಸುತ್ತ ಸಮುದಾಯವನ್ನು ಗುಲಾಮಗಿರಿಯಲ್ಲಿ ಇರಿಸಲು ಈ ಗುಂಪನ್ನು ಶೋಷಕರು ಬಳಸಿಕೊಳ್ಳುತ್ತಿರುತ್ತಾರೆ. ಇನ್ನು ಮೂರನೆಯ ಗುಂಪು; ಇವರ ಬಗ್ಗೆ ಹೇಳುವುದೇ ಬೇಡ. ತಮ್ಮ ಬಗ್ಗೆ ಜಾಗೃತಗೊಳ್ಳದ ಇವರು ಶೋಷಕರಿಗೆ ಸಿಗುವ ಸುಲಭ ಬಲಿಪಶುಗಳಾಗಿದ್ದಾರೆ.
ಅಂದಹಾಗೆ ಈ ಮೂರು ಗುಂಪುಗಳಲ್ಲಿ ಕೇವಲ ವ್ಯಕ್ತಿಗಳು ಮಾತ್ರ ಬರುತ್ತಾರೆಯೇ? ಇಲ್ಲ. ಇಡೀ ಜಾತಿಗಳು ಒಂದೊಂದು ಗುಂಪಿನಲ್ಲಿ ಬರಬಹುದು ಅಥವಾ ಒಂದೇ ಜಾತಿಯ ಒಂದೊಂದಷ್ಟಷ್ಟು ಜನರು ಮೂರೂ ಗುಂಪಿನಲ್ಲಿ ಬರಬಹುದು. ಅದು ಆಯಾ ಜಾತಿಗಳು ಮತ್ತು ವ್ಯಕ್ತಿಗಳು ತಾವು ಎಲ್ಲೆಲ್ಲಿ ಬರುತ್ತೇವೆ ಎಂದು ತಾವೇ ಗುರುತಿಸಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಈ ಮೂರು ಬಗೆಯ ಗುಂಪುಗಳಿರುವುದಂತು ನಿಶ್ಚಿತ.
ಕೊನೆಯ ಮಾತು: ನಿನಗೆ ನೀನೇ ಬೆಳಕು ಬುದ್ಧ ಹೇಳುವ ಮಾತು. ನಿಮ್ಮ ವಿಮೋಚನೆ ನಿಮ್ಮ ಕೈಯಲ್ಲೇ ಇದೆ ಇದು ಡಾ.ಅಂಬೇಡ್ಕರರು ಹೇಳುವ ಮಾತು. ಆದ್ದರಿಂದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಈ ಮೂರು ಬಗೆಯ ಹೋರಾಟ ಮಾಡದೆ, ಅದರಲ್ಲೂ ನಿರಂತರ ಹೋರಾಟ ಮಾಡದೆ ದಲಿತರಿಗೆ ವಿಮೋಚನೆ ಇಲ್ಲ, ಗುಲಾಮಗಿರಿಯಿಂದ ಹೊರಬರುವ ಮಾರ್ಗ ಖಂಡಿತ ಇಲ್ಲ.
***
Comments
Post a Comment