-ರಘೋತ್ತಮ ಹೊ.ಬ
ವೈದ್ಯರು, ಆಡು ಭಾಷೆಯಲ್ಲಿ ಡಾಕ್ಟರ್ ಗಳು ಜೀವ ಉಳಿಸುವ ಪ್ರತಿಭೆಗಳು ಅವರು. ಮನುಷ್ಯ ತನ್ನ ಏಳೆಗೆಗೆ ಉಳಿವಿಗೆ ತಾನೇ ಕಂಡುಕೊಂಡ ಶ್ರೇಷ್ಠ ವೃತ್ತಿ ಅದು. ಅದು ಇರಲಿಲ್ಲ ಎಂದರೆ ಎಲ್ಲರೂ ಎಲ್ಲದಕ್ಕೂ ದೇವರ ಮೊರೆ ಹೋಗಬೇಕಿರುತ್ತಿತ್ತು. ಆದರೆ ಹಾಗಾಗಿಲ್ಲ.
ವೈದ್ಯ ವೃತ್ತಿಯಲ್ಲಿ ಜಾತಿ ಇಲ್ಲವೇ? ಖಂಡಿತ ಇಲ್ಲ. ನಿಮ್ಹಾನ್ಸ್ ನ ಖ್ಯಾತ ವೈದ್ಯರಾದ ಗೆಳೆಯರಾದ ಡಾ.ಲಿಂಗರಾಜುರವರು ಬಹಳ ಸ್ಪಷ್ಟವಾಗಿ ಹೇಳುವುದು "ಇಲ್ಲಿ ಕೆಲಸ ಗೊತ್ತಿರುವವರೆ ಶ್ರೇಷ್ಠರು ಜಾತಿ ಗೀತಿ ಇಲ್ಲಿ ಏನೂ ಇಲ್ಲ" ಎಂದು. ಹಾಗಿದ್ದರೆ ಈಚೆಗೆ ಅಲೋಪತಿ ವಿರುದ್ಧ ಕೆಲವರಿಂದ ಟೀಕೆಗಳು ಬರುತ್ತವಲ್ಲ? ವೈದ್ಯ ವೃತ್ತಿಯಲ್ಲೂ ಧರ್ಮ ಹುಡುಕುವವರ ಜನ ವಿರೋಧಿಗಳ ಕ್ಷುಲ್ಲಕ ನಡೆಯದು. ವಾಸ್ತವ ಏನೆಂದರೆ ಹಿಂದೆ ಭಾರತದಲ್ಲಿ ವೈದ್ಯ ವೃತ್ತಿ ಇತಿಹಾಸದಲ್ಲಿ ಆರಂಭ ಆಯಿತು. ಆದರೆ ಮೌಢ್ಯ, ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ಅದು ಅಲ್ಲೇ ನಿಂತಿತು. ಹೇಗೆಂದರೆ ರೋಗಿಗಳನ್ನು ಅವರ ಜಾತಿ ಮೀರಿ ಮುಟ್ಟಬೇಕಾಗುತ್ತದಲ್ಲ ಎಂದು ಅನೇಕರು ಹಿಂಜರಿಯುತ್ತಿದ್ದರಂತೆ! ಈ ಬಗ್ಗೆ ತಮಿಳುನಾಡಿನ ಪಂಡಿತ ಅಯೋಧಿ ದಾಸ್ ರವರ ಜೀವನ ಚರಿತ್ರೆಯಲ್ಲಿ ನಾವು ಕಾಣಬಹುದು. ಬಾಬಾಸಾಹೇಬ್ ಅಂಬೇಡ್ಕರರು ಕೂಡ ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ವೈಜ್ಞಾನಿಕ ಸಂಶೋಧನೆ ಹಿಂದುಳಿಯಿತು ಎಂದು ಒಂದೆಡೆ ಹೇಳುತ್ತಾರೆ.
ಆದರೆ ವಸಾಹತುಶಾಹಿಗಳ ಆಗಮನದ ನಂತರ ಈಗಿನ ಮೆಡಿಸಿನ್ ಪದ್ಧತಿ ಆರಂಭವಾಯಿತು. ಇಲ್ಲಿ ನಾವು ತಿಳಿಯಬೇಕಾದ್ದೆಂದರೆ, ವೈದ್ಯ ವೃತ್ತಿಗೆ ದೇಶಗಳ ಗಡಿಯೂ ಇಲ್ಲ, ಎಲ್ಲೇ ಹೊಸ ಸಂಶೋಧನೆ ಯಾವುದೇ ರೋಗಕ್ಕೂ ನಡೆದರೂ ಅದು ಎಲ್ಲಾ ದೇಶಗಳನ್ನು ತಲುಪಬೇಕು! ಇದೇ ವೈದ್ಯ ವೃತ್ತಿಯ ವಿಶಿಷ್ಟ ಲಕ್ಷಣವಾಗಿದೆ.
ಇನ್ನೂ ವೈದ್ಯರ ಬಗ್ಗೆ ಹೇಳುವುದಾದರೆ ಮನುಷ್ಯ ವೈದ್ಯರ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ. ಹೇಳಿದರೂ ನಷ್ಟ ಸಂಬಂಧಿಸಿದ ವ್ಯಕ್ತಿಗೆ ಹೊರತು ವೈದ್ಯರಿಗಲ್ಲ. ವಯಕ್ತಿಕವಾಗಿ ನಾನು ಕೂಡ ಹಿಂದೆ ದಂತ ವೈದ್ಯಕೀಯ ಓದಲು ಸೇರಿದ್ದೆ ಆದರೆ ಒಂದಷ್ಟು ಶೈಕ್ಷಣಿಕ ವರ್ಷ ವ್ಯರ್ಥಮಾಡಿಕೊಂಡೆ ಹೊರತು ಬೇರೇನು ಲಾಭ ಆಗಲಿಲ್ಲ. ಹಾಗೆ ನನ್ನ ಆಸಕ್ತಿಯ ಕ್ಷೇತ್ರ ಅದಾಗಿರಲಿಲ್ಲ. ಆದರೆ ವಯಕ್ತಿಕವಾಗಿ ನನ್ನ ಬದುಕಿನ ಅನೇಕ ಕಷ್ಟದ ಸಂದರ್ಭಗಳಲ್ಲಿ ವೈದ್ಯ ವೃತ್ತಿ ನನ್ನ ಬದುಕಿಸಿದೆ. ಆರೋಗ್ಯದ ತೊಂದರೆಗಳಿಂದ ಕಾಪಾಡಿದೆ. ಸೋಜಿಗವೆಂದರೆ ಆ ಯಾವುದೇ ಡಾಕ್ಟರ್ ಗಳಿಗೆ ನಾವು ಪರಿಚಿತರಲ್ಲ, ಕೇವಲ ರೋಗಿಗಳಷ್ಟೆ! ಇದೇ ಈ ವೃತ್ತಿಯ ಶ್ರೇಷ್ಠತೆಯಾಗಿದೆ.
ಪ್ರತಿಯೊಬ್ಬ ಪ್ರಜೆ ಕೂಡ ವೈದ್ಯರಿಗೆ ಗೌರವ ಕೊಡಬೇಕು. ನಮ್ಮ ಅಜ್ಞಾನ ಮತ್ತು ಸ್ವಾರ್ಥ ಚಿಂತನೆಗೆ ಅವರನ್ನು ದೂರಬಾರದು ಅಥವಾ ಮಾತಾಡಬಾರದು. ಹಾಗೆಯೇ ಹೆಚ್ಚು ಹೆಚ್ಚು ವೈದ್ಯರನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಹೆಚ್ಚು ಮುತುವರ್ಜಿ ವಹಿಸಬೇಕು. ಡೊನೆಷನ್ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ಕೊಡುವುದರ ಬದಲು ಆಸಕ್ತಿ ನೋಡಿ ವೈದ್ಯಕೀಯ ಪ್ರವೇಶ ನೀಡಿ ವೈದ್ಯರನ್ನು ವ್ಯವಸ್ಥೆ ತಯಾರು ಮಾಡಬೇಕು. ಕೊವಿಡ್ ನ ಈ ಸಂಕಷ್ಟದಲ್ಲಿ ಜೀವದ ಹಂಗು ತೊರೆದು ಅವರು ನೀಡುತ್ತಿರುವ ಸೇವೆ ಬರೀ ಸೇವೆಯಲ್ಲ ಬದಲಿಗೆ ತ್ಯಾಗವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ವೈದ್ಯರ ಹಾದಿ ಅನುಕರಿಸಬೇಕು ಅನುಸರಿಸಬೇಕು. ನಿಸ್ವಾರ್ಥದಿ ಸಮಾಜ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕು, ಮನುಕುಲವ ಉಳಿಸಬೇಕು.
ಹ್ಯಾಪಿ ಡಾಕ್ಟರ್ಸ್ ಡೇ. ಡಾಕ್ಟರ್ ಗಳಿಗೆ ಶುಭವಾಗಲಿ.
Comments
Post a Comment