ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು," ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!
ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು ಕಾಣುತ್ತಿತ್ತು.
ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯಾಕೆ ಕರೆಯಬೇಕು?
ಮೊನ್ನೆ ಟಿಬೆಟಿಯನ್ ಕ್ಯಾಂಪ್ ಬೈಲಕುಪ್ಪೆಗೆ ಹೋಗಿದ್ದೆ. ಅಲ್ಲಿ ಕೆಲಸವನ್ನು ಅಂದರೆ ಹೊಟೆಲ್ ನಲ್ಲಿ ಊಟ ಬಡಿಸುವುದು, ಅಡುಗೆ ಮಾಡುವುದು, ಕಸ ಗುಡಿಸುವುದು, ಶೌಚಾಲಯ ಶುಚಿಗೊಳಿಸುವುದು... ಹೀಗೆ ಎಲ್ಲವನ್ನು ಎಲ್ಲರೂ ಮಾಡುತ್ತಾರೆ. ನನ್ನ ಕಣ್ಣೆದುರೇ ಅತಿಥಿ ಗೃಹವೊಂದರಲ್ಲಿ ವ್ಯಕ್ತಿಯೊಬ್ಬ ಎಲ್ಲಾ ಶೌಚಾಲಯಗಳನ್ನು ಶುಚಿಗೊಳಿಸಿದ. ಸ್ನಾನ ಮಾಡಿ ಮಧ್ಯಾಹ್ನ ಅತಿಥಿಗೃಹದ ಆ ಹೊಟೆಲ್ ನಲ್ಲಿ ಅಡುಗೆ ಭಟ್ಟನಾಗಿಯೂ ಕೆಲಸ ಮಾಡಿದ, ಸಾಯಂಕಾಲ ನಮ್ಮ ಜೊತೆ ಫುಟ್ಬಾಲ್ ಆಡಲು ಬಂದ! ಅಲ್ಲಿ ಆತನ ಕೆಲಸಕ್ಕೆ ತಾರತಮ್ಯ ಎಂಬ ಮಾತೇ ಇರಲಿಲ್ಲ. ಮತ್ತು ಆತನಿಂದ ಅಡುಗೆ ಮಾಡಿಸಿ ತಿಂದ ನಾವೇನು ಸತ್ತು ಹೋಗಲಿಲ್ಲ. ಆದರೆ ನಮ್ಮಲ್ಲಿ? ನಿರ್ದಿಷ್ಟ ಆ ಕೆಲಸ ಮಾಡಲು ಅದೇ ಜಾತಿಯವರು ಬೇಕು. ನಮ್ಮ ಸರ್ಕಾರಗಳೂ ಅಷ್ಟೇ ನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಬೀದಿ ಶುಚಿಗೊಳಿಸಲು ಅದೇ ಜಾತಿಯವರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರಿಗೆ ಸುರಕ್ಷತೆಯ ಯಾವ ಸಾಧನವೂ ಇಲ್ಲ. ಆರೋಗ್ಯವಂತು ಇಲ್ಲವೇ ಇಲ್ಲ. ದೌರ್ಜನ್ಯದ ಪರಾಕಾಷ್ಠೆ ಅನ್ನುತ್ತಾರಲ್ಲ ಅದು ಮೇರೆ ಮೀರುತ್ತದೆ.
ಪ್ಲೀಸ್, ಇದು ಎಲ್ಲಿಯವರೆಗೆ?
ಹಾಗೆಯೇ ಕೆಲವರು ಹೇಳುತ್ತಾರೆ " ಅವರೇ ಬರುತ್ತಾರೆ ಸಾರ್, ನಾವೇನು ಕರೀತೀವಾ?" ಎಂದು. ಆದರೆ ನಮ್ಮ ನಮ್ಮ ಶೌಚಾಲಯಗಳನ್ನು ನಾವೇ ತೊಳೆದುಕೊಂಡರೆ ಆ ಅಭ್ಯಾಸ ರೂಢಿಸಿಕೊಂಡರೆ ಅವರ್ಯಾಕೆ ಬರುತ್ತಾರೆ? ಇಂತಹ ಅಭ್ಯಾಸ ತೊಲಗಬೇಕು. ಯಾಕೆಂದರೆ ಯಾವ ಕೋರ್ಟ್ ಕೂಡ ತೀರ್ಪು ಇತ್ತಿಲ್ಲ ಶೌಚಾಲಯವನ್ನು ಪೌರಕಾರ್ಮಿಕ ಸಮುದಾಯವೇ ಮಾಡಬೇಕು ಎಂದು. ಹಾಗೆಯೇ ಯಾವ ಸಂವಿಧಾನ, ಪಾರ್ಲಿಮೆಂಟ್ ಕೂಡ ಅಂತ ಶಾಸನ ಮಾಡಿಲ್ಲ ಶೌಚಾಲಯವನ್ನು ಪೌರಕಾರ್ಮಿಕ ಸಮುದಾಯವೇ ಮಾಡಬೇಕು ಎಂದು. ಹೀಗಿರುವಾಗ ಯಾಕೆ ಹೀಗೆ? ಇನ್ನೆಷ್ಟು ದಿನ ಇಂತಹ ಉದ್ಯೋಗಾಧಾರಿತ ಜಾತಿ ತಾರತಮ್ಯದ ರೋಗ?
ದಯವಿಟ್ಟು ಬಿಟ್ಟುಬಿಡೋಣ. ನಮ್ಮ ನಮ್ಮ ಶೌಚಾಲಯಗಳನ್ನು ನಾವೇ ತೊಳೆದುಕೊಳ್ಳೋಣ. ಗಾರೆ ಕೆಲಸ, ವರ್ಕ್ ಶಾಪ್ ಕೆಲಸಗಳನ್ನು ಎಲ್ಲರೂ ಮಾಡುವಂತೆ ಶೌಚಾಲಯ ಶುಚಿಗೊಳಿಸುವ ಕೆಲಸವನ್ನು ಎಲ್ಲರೂ ಎಲ್ಲಾ ಜಾತಿಯವರು ಮಾಡೋಣ. ಬೇಕಿದ್ದರೆ ತುಸು ಜಾಸ್ತಿ ಕೂಲಿ ಪಡೆದುಕೊಳ್ಳೋಣ. ಈ ದಿಸೆಯಲ್ಲಿ ಪೌರಕಾರ್ಮಿಕ ಸಮುದಾಯದ ಮೇಲೆ ನಾವು ನಡೆಸುತ್ತಿರುವ ಈ ಭೀಕರ ಮಾನವ ಹಕ್ಕು ದೌರ್ಜನ್ಯ ವಿರೋಧಿ ನಡೆಯಿಂದ ನಾವು ಹಿಂದೆ ಸರಿಯೋಣ.
-ರಘೋತ್ತಮ ಹೊ.ಬ
Raghothama Hoba
Comments
Post a Comment