ಅಸ್ಪೃಶ್ಯ ವರ್ಗದವರ ಮೀಸಲಾತಿ ಮತ್ತು ಇತರೆ ಸವಲತ್ತುಗಳ ಕತೆ ಹೇಗಿದೆಯೆಂದರೆ ಅಸ್ಪೃಶ್ಯ ವರ್ಗದವರಿಗಾಗಿ ಪರಿಶಿಷ್ಟ ಜಾತಿ ಎಂಬ ಮೀಸಲು ಕೆಟಗರಿ ಸೃಷ್ಟಿಸಲಾಗುತ್ತದೆ. ನಂತರ ಅಲ್ಲಿ ಅಸ್ಪೃಶ್ಯ ವರ್ಗದವರು ಪಡೆಯುವ ಸವಲತ್ತುಗಳ ಬಗ್ಗೆ ಪಟ್ಟಭದ್ರರ ಕಣ್ಣು ಬೀಳುತ್ತದೆ. ಆ ಕಾರಣ ಅಲ್ಲಿ ಬಿಲ ಕೊರೆಯುವ ಕೆಲಸ ಆರಂಭವಾಗುತ್ತದೆ. ಪರಿಣಾಮವೆಂಬಂತೆ ಪರಿಶಿಷ್ಟ ಜಾತಿ ಎಂಬ ಆ ಪಟ್ಟಿಗೆ ಸ್ಪೃಶ್ಯ ಸಮುದಾಯಗಳನ್ನು ಸೇರಿಸಲಾಗುತ್ತದೆ. ನಂತರ ಆ ಪಟ್ಟಿಯಲ್ಲಿ ಇರುವ ಕೆಲವು ಜಾತಿ ಹೆಸರುಗಳನ್ನು ಹೋಲುವ so called ಮೇಲ್ಜಾತಿ ಜನರು ಅಂತಹ ಹೋಲಿಕೆ ಕಾರಣಕ್ಕೆ ತಾವು ಕೂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಒಳ ನುಸುಳುತ್ತಾರೆ. ವ್ಯವಸ್ಥೆ ಇದನ್ನೆಲ್ಲ ಕಣ್ಣು ಮುಚ್ಚಿ ನೋಡುತ್ತ ಕುಳಿತುಕೊಳ್ಳುತ್ತದೆ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತದೆ.
ಈ ಪ್ರಕ್ರಿಯೆ ನಂತರ ಪರಿಶಿಷ್ಟರ ಹೆಸರಲ್ಲಿ ಕೋಟಿ ಕೋಟಿ ಬಿಡುಗಡೆ ಆಗುತ್ತದೆ, ನೂರಾರು ನೇಮಕಾತಿ ಆಗುತ್ತದೆ. ಬಹುತೇಕ ನೇಮಕಾತಿಗಳು ಕೋಟಿ ಕೋಟಿ ಯೋಜನೆಗಳು ಪರಿಶಿಷ್ಟರ ಪಟ್ಟಿಯಲ್ಲಿ ಇದಕ್ಕೆಂದೆ ಸೇರಲ್ಪಟ್ಟಿರುವ ಅಥವಾ ಸೇರಿಸಲ್ಪಟ್ಟಿರುವ ಸ್ಪೃಶ್ಯ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಪರಿಶಿಷ್ಟರನ್ನು ಸೇರುತ್ತದೆ. ಅಸ್ಪೃಶ್ಯ ಸಮುದಾಯಗಳು ಬಿಡುಗಡೆಯಾದ ಹಣ ಮತ್ತು ನೇಮಕಾತಿ ಜಾಹೀರಾತು ಪತ್ರಿಕೆಗಳಲ್ಲಿ ನೋಡಿ ಖುಷಿ ಪಟ್ಟಿದ್ದೆ ಪಟ್ಟಿದ್ದು! ಹಾಗೆ ದುಡ್ಡು ಖರ್ಚು ಮಾಡಿ ಅರ್ಜಿ ಸಲ್ಲಿಸಿ "ನಿಮಗ್ಯಾನಪ ಎಲ್ಲಾ ಫ್ರೀ" ಎಂದು ಕಂಡೋರ ಕೆಂಗಣ್ಣಿಗೆ ಗುರಿಯಾಗಿ ಪರೀಕ್ಷೆ ಬರೆದು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದು ಕಂಡು ಬೇಸರಗೊಂಡಿದ್ದಷ್ಟೆ ಉಳಿದದ್ದು.
ಈ ನಡುವೆ ಪರಿಶಿಷ್ಟರ ಯೋಜನೆಗಳಿಗಾಗಿ ಸಾವಿರಾರು ಕೋಟಿ ಬಿಡುಗಡೆ ಆಗುತ್ತದೆ. ಆ ದುಡ್ಡಿನಲ್ಲಿ ಅಸ್ಪೃಶ್ಯ ವರ್ಗದವರು ಆಗಾಗ ಮೇಲ್ಜಾತಿ ಬೀದಿ ತಿರುಗಾಡುವುದರಿಂದ ಅಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ದಲಿತರು ದಸರೆ ಕೂಡ ನೋಡಲು ಹೋಗುವುದರಿಂದ , ಅಲ್ಲಿ ಕುಣಿಯುವ ಸಿನಿಮಾ ನಟರ ಹಾಡು ಕುಣಿತ ಅವರೂ ನೋಡುವುದರಿಂದ ಅಲ್ಲಿಗೂ ಎಸ್ಸಿ/ ಎಸ್ಟಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದರ ನಡುವೆ ಬೇರೆ ಜಾತಿಯವರು ಹೀಗೆ "ಬಿಡುಗಡೆ ಮಾಡಲಾದ" ಹಣ ಮತ್ತು ಅಂತಹ ಸುದ್ದಿ ಓದಿ ಕರುಬಿದ್ದೆ ಕರುಬಿದ್ದು!
ಅಸ್ಪೃಶ್ಯ ಜನರಿಗಾಗಿ ವಿವಿಧ ನಿಗಮಗಳನ್ನು ಮಾಡಲಾಗುತ್ತದೆ. ಅಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು? ಅಸ್ಪೃಶ್ಯ ವರ್ಗದವರಿಗೆ ಗೊತ್ತೇ ಆಗುವುದಿಲ್ಲ, ಅದರ ಸುದ್ದಿಯೂ ಕೂಡ ಇವರಿಗೆ ಸಿಗುವುದೇ ಇಲ್ಲ. ಈ ನಡುವೆ ಜನಪ್ರತಿನಿಧಿಗಳ ಶಿಫಾರಸ್ಸು ಬೇಕು. ಅದು ಇವರಿಗೆ ಸಿಗುವುದೇ ಇಲ್ಲ. ಸಿಕ್ಕರೂ ಸಬ್ಸಿಡಿ ಮತ್ತೊಂದು ಮಗದೊಂದು ಇವರಿಗೆ ಮಂಜೂರು ಆದರೂ ಬ್ಯಾಂಕುಗಳು ಇದಕ್ಕೆ ಕೊಕ್ಕೆ ಹಾಕುತ್ತವೆ. ಫಲಾನುಭವಿ ಅರ್ಜಿದಾರರನನ್ನು ಅಲೆಸಿ ಅಲೆಸಿ ಸತಾಯಿಸುತ್ತವೆ. ಕೊನೆಗೆ ಸಾಲ ಧನಸಹಾಯ ಏನನ್ನೂ ಮಾಡದೆ ಮನೆಗೆ ಕಳಿಸುತ್ತವೆ. ಈ ನಡುವೆ ಹೀಗೆ ಮಾಡುವುದರಿಂದ ಅಸ್ಪೃಶ್ಯರ ಹಣ ಅದು ಹಾಗೆಯೇ ಉಳಿಯುತ್ತದೆ. ಉಳಿದ ಹಣ "ಖರ್ಚಾಗದ ಅನುದಾನ" ಎಂದು ದಾಖಲಾಗಿ ಮುಂದಿನ ವರ್ಷಕ್ಕೆ ಸೇರಿಸಲ್ಪಡುತ್ತದೆ.
ಹಾಗಿದ್ದರೆ ಅಸ್ಪೃಶ್ಯ ವರ್ಗದವರಿಗೆ ನಿಜಕ್ಕೂ ಸಿಗುವುದು? ಅಪ್ಲೈ ಮಾಡಿದ್ದರೆ ವರ್ಷಕ್ಕೊಮ್ಮೆ ಸಿಗುವ ಬಿಡುಗಾಸು ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್, ಅಕಸ್ಮಾತ್ ಹಾಸ್ಟೆಲ್ ಸೇರಿದ್ದರೆ ಅಲ್ಲಿ ನೀಡಲ್ಪಡುವ ಕಳಪೆ ಗುಣಮಟ್ಟದ ಮೂರ್ ಹೊತ್ತು ಊಟ ಅಷ್ಟೇ.
***
S this is reality sir..
ReplyDelete