"ಸರ್, ಏನ್ ವ್ಯಾಪಾರ ಮಾಡ್ಬೇಕು? ಹೇಗೆ ವ್ಯಾಪಾರ ಮಾಡ್ಬೇಕು? ಬಂಡವಾಳ ಹೇಗೆ?... ಈಚೆಗೆ ಇಂತಹ ಪ್ರಶ್ನೆ ಗಳು ನನಗೆ ಮಾಮೂಲಿಯಾಗಿಬಿಟ್ಟಿವೆ. ಸಲಹೆ ನೀಡುತ್ತಾ ನೀಡುತ್ತಾ ಒಂದು ರೀತಿ ಬಿಸಿನೆಸ್ ಗುರು ಆಗ್ಬಿಟ್ಟಿದ್ದೇನೆ. ಇರಲಿ, ನೋ ಪ್ರಾಬ್ಲಂ. ಈ ನಿಟ್ಟಿನಲ್ಲಿ ಸ್ನೇಹಿತರೊಬ್ಬರ ಈ ಸಲದ ಪ್ರಶ್ನೆ ಅಂದರೆ ದಲಿತ ಸಮುದಾಯದ ಯುವಕರು/ ಯುವತಿಯರು ತುಂಬಾ ಸರಳವಾಗಿ ಕಡಿಮೆ ವೆಚ್ಚದಲ್ಲಿ ಬಿಸಿನೆಸ್ ಹೇಗೆ ಮಾಡಬಹುದು? ಎಲ್ಲಿ ಮಾಡಬಹುದು ಎಂಬುದು. ಉತ್ತರ ಸರಳ: ಫುಟ್ ಪಾತ್ ಗಳು.
ಹೌದು, ರಸ್ತೆ ಫುಟ್ ಪಾತ್ ಗಳು, ಖಾಲಿ ನಿವೇಶನಗಳು ದಲಿತ ವ್ಯಾಪಾರ- ವ್ಯವಹಾರದ ಪ್ರಯೋಗ ಶಾಲೆಗಳಾಗುತ್ತವೆ. ಕಡಿಮೆ ಬಂಡವಾಳ, ಹೆಚ್ಚಿನ ಕಸ್ಟಮರ್ ಗಳನ್ನು ಸೆಳೆಯುವ ಸ್ಥಳಗಳು ಇವು ಎಂಬುದು ಪ್ರಮುಖ ಕಾರಣ. ಇದಕ್ಕೆ ಬೇಕಿರುವುದು? ಧೃಡನಿರ್ಧಾರ ಮತ್ತು ಆತ್ಮವಿಶ್ವಾಸ. ಹಾಗೆಯೇ ನಾಚಿಕೆ ಮತ್ತು ಮುಜುಗರರಹಿತ ನಿಲುವು. ಖಂಡಿತ, ಈ ಮೂರು ಅಂಶಗಳಿದ್ದರೆ ಬಂಡವಾಳ ಇಲ್ಲದಿದ್ದರೂ ದಲಿತ ಸಮುದಾಯದ ಯಾರೇ ಆದರೂ ಬಿಸಿನೆಸ್ ಮಾಡಬಹುದು.
ಧೃಡನಿರ್ಧಾರದ ಬಗ್ಗೆ ಹೇಳುವುದಾದರೆ, ದಲಿತ ಯುವಕ/ ಯುವತಿಯೋರ್ವ ತಾನು ಬಿಸಿನೆಸ್ ಮಾಡಬೇಕು ಎಂದು ಕೊಳ್ಳುತ್ತಾನೆ/ಳೆ. ಆದರೆ ಅಸ್ಪೃಶ್ಯತೆ ಕಾರಣ ಆತನಿಗೆ/ ಆಕೆಗೆ ಇತರೆ ವರ್ಗದವರು ಅಂಗಡಿ ಮಳಿಗೆ ಬಾಡಿಗೆ ಕೊಡುವುದಿಲ್ಲ. ಪ್ರಶ್ನೆ ಅಂದರೆ ಏನು ಮಾಡಬೇಕು? ಬಿಸಿನೆಸ್ ಚಿಂತನೆ ಬಿಟ್ಟು ಬಿಡುವುದೆ? ಇಲ್ಲ. ಖಾಲಿ ಇರುವ ಸಾರ್ವಜನಿಕ ಜಾಗಗಳಲ್ಲಿ, ಕಸ್ಟಮರ್ ಗಳು ಹೆಚ್ಚು ಓಡಾಡುವ ಫುಟ್ ಪಾತ್ ಬದಿಗಳಲ್ಲಿ ಬಿಸಿನೆಸ್ ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಅವರು ಬರಬೇಕು. ಸಾಧ್ಯ ಆದರೆ ಸ್ಥಳೀಯ ದಲಿತ ಸಂಘಟನೆಗಳು, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ಎಲ್ಲರ ಸಹಕಾರ ಪಡೆಯಬೇಕು.
ಮುಂದುವರೆದು ಆತ್ಮವಿಶ್ವಾಸ, ನಾಚಿಕೆ, ಮುಜುಗರದ ಅಂಶಗಳ ಬಗ್ಗೆ ಮಾತನಾಡುವುದಾದರೆ, ದಲಿತ ಸಮುದಾಯದ ಯುವಕರ/ ಯುವತಿಯರ ವ್ಯಾಪಾರ- ವ್ಯವಹಾರದಲ್ಲಿ ಪಾಲ್ಗೊಳ್ಳುವಿಕೆಯ ಪ್ರಮುಖ ಕೊರತೆಯೇ ಆತ್ಮವಿಶ್ವಾಸ. ಮುಖ್ಯವಾಗಿ ಅಪ್ಪ ಅಮ್ಮ ಯಾವುದೊ ಸರ್ಕಾರಿ ನೌಕರಿಯಲ್ಲಿ ಇರುತ್ತಾರೆ. ಅವರ ಮಗನಾಗಿ/ ಮಗಳಾಗಿ ತಾನು ಬೀದಿಯಲ್ಲಿ ವ್ಯಾಪಾರ ಮಾಡಬೇಕಾ ಎಂಬ ಅಹಂ ಮತ್ತು ಮುಜುಗರ ಅವರ ಎದುರು ಬರುತ್ತದೆ. ಭಯವು ಇರುತ್ತದೆ ಎಲ್ಲಿ ಬೇರೆ ಜಾತಿಯವರು ತೊಂದರೆ ಕೊಡ್ತಾರೊ ಹಾಗೆ ಹೀಗೆ ಎಂದು. ವಾಸ್ತವ ಎಂದರೆ ಅಪ್ಪ ಅಮ್ಮ ಸರ್ಕಾರಿ ನೌಕರಿಯಲ್ಲಿ ಇದ್ದರೂ ಮಕ್ಕಳಿಗೆ ಅದು ಸಿಗಲಿಲ್ಲ. ಹಾಗಂತ ಬದುಕಬಾರದೆ? ದೇಶದ ಅಭಿವೃದ್ಧಿಗೆ ವ್ಯಾಪಾರ- ವ್ಯವಹಾರದ ಮೂಲಕ ಕೊಡುಗೆ ನೀಡಬಾರದೆ? ಅಂದಹಾಗೆ ಮುಜುಗರ/ ನಾಚಿಕೆ ಇಟ್ಟುಕೊಂಡರೆ ತಾತನ ಕಾಲದ ಜೀತ ಪದ್ಧತಿಗೆ ಮತ್ತೆ ಹೋಗಬೇಕಾಗುತ್ತದೆ! ಆದ್ದರಿಂದ ಮುಜುಗರ, ನಾಚಿಕೆ, ಹಿಂಜರಿಕೆ ಯಾವುದೂ ಕೆಲಸಕ್ಕೆ ಬರುವುದಿಲ್ಲ ಅಥವಾ ಅನಗತ್ಯ. ಭೂಮಿ ಮೇಲೆ ಹುಟ್ಟಿದ ಮೇಲೆ ಎಲ್ಲಾ ಮನುಷ್ಯರಂತೆ ನಾವೂ ಸಹಜವಾಗಿ ಬದುಕು ಸಾಗಿಸಬೇಕು. ಈ ನಂಬಿಕೆ, ತಿಳುವಳಿಕೆ ಫುಟ್ ಪಾತ್ ಗಳಲ್ಲಿ ವ್ಯಾಪಾರ ವ್ಯವಹಾರಕ್ಕೆ ಇಳಿಯುವ ದಲಿತ ಯುವಕ/ ಯುವತಿಯರಿಗೆ ಇರಬೇಕು. ಮುಖ್ಯವಾಗಿ ನಾಚಿಕೆ, ಅಹಂ, ಮುಜುಗರ ಎಂದರೆ ಮುಂದೆ ಜೀತ ಮಾಡಲು ತಯಾರಾಗಬೇಕಾಗುತ್ತದೆ ಎಂಬ ಸಹಜ ಸತ್ಯ ಅರಿಯಬೇಕು.
ಫುಟ್ ಪಾತ್ ವ್ಯಾಪಾರ- ವ್ಯವಹಾರ ಅಂದಾಗ ಅನ್ಯ ಜಾತಿ ಕಿರುಕುಳ ಇದ್ದೆ ಇರುತ್ತದೆ. ಅಂದಹಾಗೆ ಅಂತಹ ಕಿರುಕುಳ ಮನೆಯೊಳಗೆ ಸುಮ್ಮನೆ ಇದ್ದರೂ ಇರುತ್ತದೆ! ಆದ್ದರಿಂದಇದನ್ನು ಎದುರಿಸುವ, ಸಮಸ್ಯೆ ಬಂದರೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬರಬೇಕು. ಯಾಕೆಂದರೆ ನಮ್ಮ ಉದ್ದೇಶ ವ್ಯಾಪಾರ- ವ್ಯವಹಾರದ ಮೂಲಕ ಆರ್ಥಿಕ ಚಟುವಟಿಕೆ ಪಾಲ್ಗೊಳ್ಳುವುದೇ ಹೊರತು ಜಗಳ ಕದನವಲ್ಲ. ಆ ಕಾರಣ ಶಾಂತಿ ಸಹನೆಗೆ ಹೆಚ್ಚು ಒತ್ತು ಕೊಡಬೇಕು, ಯಾವುದೇ ಕಾರಣಕ್ಕು ಉದ್ರೇಕಗೊಂಡು ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳಬಾರದು. ಅಗತ್ಯಬಿದ್ದರೆ ಕಾನೂನು ನೆರವು ಪಡೆದುಕೊಳ್ಳಬೇಕು. ಅನ್ಯ ಜಾತಿಗಳ ಜೊತೆ ಸಂಘರ್ಷ ಇದು ಒಂದು ತಲೆಮಾರು ಇರುತ್ತದೆ. ಅಭ್ಯಾಸ ಆದ ನಂತರ ಅದು ಕೊನೆಯಾಗುತ್ತದೆ. ಅಂದಹಾಗೆ ಫುಟ್ ಪಾತ್ ವ್ಯಾಪಾರ, ಮುಖ್ಯವಾಗಿ ಗುಣಮಟ್ಟ ಶುಚಿತ್ವ ಮತ್ತು ನಾವೀನ್ಯತೆ ಕಡೆ ಗಮನ ಇರುವುದು ಅಗತ್ಯ. ಮೊದಲೆ ಹೇಳಿದ ಈಗಾಗಲೇ ಆ ಫೀಲ್ಡ್ ನಲ್ಲಿ ಇರುವ ಇತರೆ ಜಾತಿ ಜನರ ಜೊತೆ ದಲಿತ ಯುವಕರು/ ಯುವತಿಯರು ಸಂಘರ್ಷ ಮಾಡಿಕೊಳ್ಳದೆ ಅವರ ಜೊತೆ ಬಿಸಿನೆಸ್ ಒಪ್ಪಂದ ಮಾಡಿಕೊಳ್ಳುವುದು ಅಗತ್ಯ ಸಾಧ್ಯ ಆದರೆ ಪಾಲುದಾರರಾಗಿ ಸ್ನೇಹ ಬೆಳೆಸಿಕೊಳ್ಳಬೇಕು.
ಖಂಡಿತವಾಗಿ, ಫುಟ್ ಪಾತ್ ವ್ಯಾಪಾರ- ವ್ಯವಹಾರ ಈ ದೇಶದ ಅಸ್ಪೃಶ್ಯತೆ ಆಚರಣೆಗೆ ತಕ್ಕ ಉತ್ತರ ಆಗಲಿದೆ. ಯಾರು ನಮ್ಮ ಮನೆಗೆ ಬರುವುದಿಲ್ಲವೊ ಅವರ ಜೊತೆ ಸ್ನೇಹ ಬೆಳೆಸಲಿಕ್ಕೆ ವೇದಿಕೆಯಾಗಲಿದೆ. ಮುಖ್ಯವಾಗಿ ದಲಿತ ಉದ್ಯಮಶೀಲತೆಗೆ, ವ್ಯಾಪಾರ- ವ್ಯವಹಾರಕ್ಕೆ ರೆಡಿಮೇಡ್ ಮಳಿಗೆಗಳು ಫುಟ್ ಪಾತ್ ಗಳಾಗಲಿವೆ. ದಲಿತ ಸಮುದಾಯದ ನಿರುದ್ಯೋಗ ಫುಟ್ ಪಾತ್ ನಲ್ಲಿ ಅಂತ್ಯಗೊಳ್ಳಲಿದೆ.
***
Comments
Post a Comment